ಸಾರಾಂಶ
ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯು ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.
ನವದೆಹಲಿ: ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯು ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.
ಇದರಲ್ಲಿ ವಿಮಾನ ಅಪಘಾತವಾಗಿದ್ದಕ್ಕೆ ಪ್ರಮುಖವಾಗಿ ವಿಮಾನದಲ್ಲಿ ಇಂಧನ ಸ್ವಿಚ್ ಆಫ್ ಆಗಿರುವುದು ಕಾರಣ ಎಂದು ತನಿಖಾ ಸಂಸ್ಥೆ ಹೇಳಿದೆ. ಈ ಬಗ್ಗೆ ಅಮೆರಿಕದ ವಾಯುನಿಯಂತ್ರಕ ಫೆಡರಲ್ ಏವಿಷೇನ್ ಏಜೆನ್ಸಿ ಎಚ್ಚರಿಸಿತ್ತು ಎಂದು ವರದಿ ಹೇಳಿದೆ. ಮಿಕ್ಕಂತೆ ಯಾವುದೇ ಕೆಟ್ಟ ಹವಾಮಾನ, ಹಕ್ಕಿ ಡಿಕ್ಕಿ ಕಾರಣವಲ್ಲ ಎಂದು ಅದು ಹೇಳಿದೆ.
1. ಇಂಧನ ತುಂಬುವ ಸಾಧನಗಳು ರನ್‌ನಿಂದ ಕಟ್‌ಆಫ್‌ಗೆ ಬದಲಾದ ಕಾರಣ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಎಂಜಿನ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು.
2. ಕಾಕ್‌ಪಿಟ್ ಆಡಿಯೋದಲ್ಲಿ, ಇಬ್ಬರು ಪೈಲಟ್‌ಗಳ ಮಾತುಕತೆ ಕೇಳಿಬಂದಿದೆ. ಒಬ್ಬ ಪೈಲಟ್ ‘ನೀವು ಏಕೆ ಕಟ್‌ಆಫ್ ಮಾಡಿದ್ದೀರಿ?’ ಎಂದು ಕೇಳಿದರೆ, ಇನ್ನೊಬ್ಬ ಪೈಲಟ್ ‘ನಾನು ಮಾಡಲಿಲ್ಲ’ ಎಂದಿದ್ದಾರೆ.
3. ರ್‍ಯಾಟ್ (ರ್‍ಯಾಮ್ ಏರ್ ಟರ್ಬೈನ್)ನಿಂದ ವಿದ್ಯುತ್ ನಷ್ಟ ಉಂಟಾಗಿರುವುದು ಕಂಡುಬಂದಿದೆ. ಇದು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.
4. ಎಂಜಿನ್‌ಗಳನ್ನು ಪುನಃ ಆನ್ ಮಾಡಲು ಪ್ರಯತ್ನಿಸಿದಾಗ ಎಂಜಿನ್ 1ರಲ್ಲಿ ಭಾಗಶಃ ಚೇತರಿಕೆ ಕಂಡುಬಂದಿದೆ. ಆದರೆ ಎಂಜಿನ್ 2 ಯಾವುದೇ ಚೇತರಿಕೆಯನ್ನು ಕಂಡುಬಂದಿಲ್ಲ.
5. ವಿಮಾನವು ಒಟ್ಟು 32 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ಬಳಿಕ, ರನ್‌ವೇಯಿಂದ 0.9 ನಾಟಿಕಲ್ ಮೈಲು ದೂರದಲ್ಲಿ ಹಾಸ್ಟೆಲ್‌ಗೆ ಅಪ್ಪಳಿಸಿದೆ.
6. ವಿಮಾನದ ಥ್ರಸ್ಟ್ ಲಿವರ್‌ಗಳು ನಿಷ್ಕ್ರಿಯವಾಗಿದ್ದವು. ಇದು ಕಪ್ಪು ಪೆಟ್ಟಿಗೆ (ಬ್ಲ್ಯಾಕ್ ಬಾಕ್ಸ್)ಯ ದತ್ತಾಂಶದಿಂದ ತಿಳಿದುಬಂದಿದೆ.
7. ವಿಮಾನದಲ್ಲಿ ಬಳಸಿದ್ದ ಇಂಧನದಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ.
8. ಫ್ಲಾಪ್ ಸೆಟ್ಟಿಂಗ್ (5°) ಮತ್ತು ಗೇರ್ (ಕೆಳಗೆ) ಎರಡೂ ಟೇಕ್ ಆಫ್ ಆಗುವಾಗ ಸೂಕ್ತವಾಗಿ ಕಾರ್ಯನಿರ್ವಹಿಸಿದ್ದವು.
9. ಆಕಾಶವು ವಿಮಾನ ಹಾರಾಟಕ್ಕೆ ಸ್ವಚ್ಛಂದವಾಗಿತ್ತು. ಯಾವುದೇ ಪಕ್ಷಿಯ ಹಾರಾಟ ಅಥವಾ ಹವಾಮಾನ ವೈಪರೀತ್ಯ ಅವಘಡಕ್ಕೆ ಕಾರಣವಲ್ಲ.
10. ಇಬ್ಬರೂ ಪೈಲಟ್‌ಗಳು ಆರೋಗ್ಯವಂತರಾಗಿದ್ದರು. ವಿಮಾನ ಹಾರಾಟದಲ್ಲಿ ಸೂಕ್ತವಾದ ತರಬೇತಿ ಪಡೆದಿದ್ದರು.
11. ವಿಧ್ವಂಸಕ ಕೃತ್ಯದ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಇಂಧನ ಸ್ವಿಚ್ ದೋಷದ ಬಗ್ಗೆ ಎಫ್‌ಎಎ ಈ ಮೊದಲೇ ಸಲಹೆ ನೀಡಿತ್ತು. ಅಲ್ಲದೆ, ಏರ್ ಇಂಡಿಯಾ ವಿಮಾನದ ತಪಾಸಣೆ ನಡೆಸಿರಲಿಲ್ಲ.
12. ವಿಮಾನ ನಿರ್ದಿಷ್ಟ ತೂಕ ಮತ್ತು ಸಮತೋಲನ ಮಿತಿಯೊಳಗೆ ಇತ್ತು. ವಿಮಾನದಲ್ಲಿ ಯಾವುದೇ ಅಪಾಯಕಾರಿ ಸರಕುಗಳು ಇರಲಿಲ್ಲ.
ಘಟನೆ ಹಿನ್ನೆಲೆ:
ಜೂನ್ 12ರಂದು ಮಧ್ಯಾಹ್ನ 1:39ರ ವೇಳೆಗೆ ಅಹಮದಾಬಾದ್‌ನಿಂದ ಲಂಡನ್ ಗ್ಯಾತ್ವಿಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕಾಫ್ ಆದ 35 ಸೆಕೆಂಡುಗಳಲ್ಲಿ ವಿಮಾನ ನಿಲ್ದಾಣದ ಸಮೀಪವಿರುವ ಬಿ.ಜೆ. ಮೆಡಿಕಲ್ ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನವಾಯಿತು. ಈ ವೇಳೆ ವಿಮಾನದಲ್ಲಿದ್ದ 241 ಜನರ ಪೈಕಿ 240 ಜನರು ಸಜೀವ ದಹನರಾದರು. ಇದೇ ವೇಳೆ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಸಹ ಅಸುನೀಗಿದ್ದರು. ಪವಾಡಸದೃಶವಾಗಿ ವಿಶ್ವಾಸ್ ರಮೇಶ್ ಎಂಬ ಬ್ರಿಟೀಶ್ ಪ್ರಜೆ ಬಚಾವ್ ಆಗಿದ್ದರು. ದುರದೃಷ್ಟವಶಾತ್ ಹಾಸ್ಟೆಲ್ ಮತ್ತು ಸುತ್ತಮುತ್ತ ಇದ್ದವರ ಪೈಕಿ 20 ಜನರು ಅಸುನೀಗಿದ್ದರು.
1. ವಿಮಾನ ಪತನಕ್ಕೆ ಹಕ್ಕಿ ಡಿಕ್ಕಿ ಕಾರಣವಲ್ಲ
2. ಟೇಕಾಫ್ ಆದ ವೇಳೆ ಕೆಟ್ಟ ಹವಾಮಾನವಿಲ್ಲ
3. ಇಂಧನ ಹಾಕಿರುವುದರಲ್ಲಿ ಕಲಬೆರಿಕೆಯಿಲ್ಲ
4. ವಿಮಾನದ ಇಂಧನ ಸ್ವಿಚ್ ಆಫ್ ಕಾರಣ
5. ಸ್ವಿಚ್ ಸಮಸ್ಯೆ ಬಗ್ಗೆ ಎಚ್ಚರಿಸಿದ್ದ ಅಮೆರಿಕ
6. ದೇಶದ ಭೀಕರ ದುರಂತಗಳಲ್ಲಿ ಒಂದು