ಇಡೀ ಜಗತ್ತು ಕೊರೋನಾ ನೀಡಿದ ಆಘಾತದಿಂದ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಹೊತ್ತಿನಲ್ಲೇ, ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾದತ್ತ ಹೊರಟಿರುವ ಹಡಗೊಂದರಲ್ಲಿ ‘ಹಂಟು ವೈರಸ್’ ಎಂಬ ಇದೇ ರೀತಿಯ ವೈರಸ್ ಒಂದು ಪತ್ತೆಯಾಗಿದೆ. 8 ಜನರಲ್ಲಿ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.
ಜಿನೇವಾ: ಇಡೀ ಜಗತ್ತು ಕೊರೋನಾ ನೀಡಿದ ಆಘಾತದಿಂದ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಹೊತ್ತಿನಲ್ಲೇ, ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾದತ್ತ ಹೊರಟಿರುವ ಹಡಗೊಂದರಲ್ಲಿ ‘ಹಂಟು ವೈರಸ್’ ಎಂಬ ಇದೇ ರೀತಿಯ ವೈರಸ್ ಒಂದು ಪತ್ತೆಯಾಗಿದೆ. ಇದು ಈಗಾಗಲೇ 8 ಜನರಲ್ಲಿ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರೀ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಡಗಿನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಮೇಲ್ವಿಚಾರಣೆ ನಡೆಸುತ್ತಿದೆ.
ಹಡಗಿನಲ್ಲಿ ಹಬ್ಬಿದ ಹಂಟು:
ಎಂವಿ ಹೊಂಡಿಯಸ್ ಎಂಬ ಕ್ರೂಸ್ ಹಡಗು ಸುಮಾರು 150 ಜನರನ್ನು ಹೊತ್ತು ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾದತ್ತ ಹೊರಟಿತ್ತು. ಇದರಲ್ಲಿದ್ದ 8 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 3 ಪ್ರಕರಣಗಳು ಲ್ಯಾಬ್ ಪರೀಕ್ಷೆಯಲ್ಲಿ ಖಚಿತವಾಗಿವೆ. ಹಡಗಿನಲ್ಲಿದ್ದ ಮೂವರು ಸೋಂಕಿನಿಂದ ಮೃತಪಟ್ಟಿದ್ದರೆ, ನಾಲ್ಕಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ. ಈಗ ಹಡಗು ಕೇಪ್ ವರ್ಡೆ ತೀರದ ಬಳಿ ನಿಂತಿದೆ. ಸ್ಥಳೀಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರ ಮೇಲ್ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಡಬ್ಲ್ಯುಎಚ್‌ಒ ಇದನ್ನು ಗಂಭೀರವಾಗಿ ಪರಿಗಣಿಸಿ ವಿಶ್ವದಾದ್ಯಂತ ಸೋಂಕಿತರ ಸಂಪರ್ಕವನ್ನು ಜಾಲಾಡುತ್ತಿದೆ.
ಏನಿದು ವೈರಸ್? ಹೇಗೆ ಹರಡುತ್ತದೆ? :
ಹಂಟು ವೈರಸ್ ಸಾಮಾನ್ಯವಾಗಿ ಇಲಿ, ಹೆಗ್ಗಣ ಮತ್ತು ಇತರ ದಂಶಕಗಳಲ್ಲಿ ಕಂಡುಬರುತ್ತದೆ. ಮನುಷ್ಯರಿಗೆ ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಮೈಕೈ ನೋವು, ಜೀರ್ಣಕೋಶದ ಸಮಸ್ಯೆ, ನಂತರ ತೀವ್ರ ಉಸಿರಾಟದ ಸಮಸ್ಯೆ ಉಂಟುಮಾಡುತ್ತದೆ. ಅಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಗಿನ ಹಡಗಿನಲ್ಲಿ ಕಂಡುಬಂದಿರುವುದು ಆ್ಯಂಡಿಸ್ ತಳಿ ಎಂದು ಡಬ್ಲ್ಯುಎಚ್‌ಒ ದೃಢಪಡಿಸಿದೆ. ಇದು ದಕ್ಷಿಣ ಅಮೆರಿಕ (ಅರ್ಜೆಂಟೀನಾ, ಚಿಲಿ) ಪ್ರದೇಶದಲ್ಲಿ ಕಂಡುಬರುತ್ತದೆ.
