ವಿಶ್ವದ ಮೊದಲ ಎಐ ವೈರಸ್‌ ಸೃಷ್ಟಿ

| Published : Sep 30 2025, 12:03 AM IST

ಸಾರಾಂಶ

ಬ್ಯಾಕ್ಟೀರಿಯಾದಿಂದಾಗಿ ವಿಶ್ವಾದ್ಯಂತ ಹಲವು ಹೊಸಹೊಸ ರೋಗಗಳು ಉದ್ಭವಿಸುತ್ತಿರುವ ಹೊತ್ತಿನಲ್ಲಿ, ಸ್ಟಾನ್‌ಫರ್ಡ್‌ ವಿವಿಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವೈರಸ್‌ಗಳನ್ನು ಸೃಷ್ಟಿಸಿದ್ದಾರೆ.

ಬ್ಯಾಕ್ಟೀರಿಯಾ ಕೊಲ್ಲುವ ವೈರಸ್‌ ಸೃಷ್ಟಿಸಿಗೆ ಕೃತಕ ಬುದ್ಧಿಮತ್ತೆ ಬಳಕೆ

ವಿಜ್ಞಾನಿಗಳು ಸೃಷ್ಟಿಸಿದ 100ರ ಪೈಕಿ 16ಕ್ಕೆ ಬ್ಯಾಕ್ಟೀರಿಯಾ ನಾಶ ಗುಣ

ಸ್ಟಾನ್ಫರ್ಡ್: ಬ್ಯಾಕ್ಟೀರಿಯಾದಿಂದಾಗಿ ವಿಶ್ವಾದ್ಯಂತ ಹಲವು ಹೊಸಹೊಸ ರೋಗಗಳು ಉದ್ಭವಿಸುತ್ತಿರುವ ಹೊತ್ತಿನಲ್ಲಿ, ಸ್ಟಾನ್‌ಫರ್ಡ್‌ ವಿವಿಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವೈರಸ್‌ಗಳನ್ನು ಸೃಷ್ಟಿಸಿದ್ದಾರೆ.

ಈ ಆವಿಷ್ಕಾರದಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಅನಾರೋಗ್ಯಗಳಿಗೆ ಔಷಧಿಗಳ ಸೃಷ್ಟಿ ಒಂದು ಸಾಧನೆಯಾದರೆ, ಎಐ ಬಳಸಿ ಅದನ್ನು ಮಾಡಿದ್ದು ಇನ್ನೊಂದು ಹೆಗ್ಗಳಿಕೆಯಾಗಿದೆ.

ಎ-ಕೊಲಿ ಎಂಬ ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾಗಿರುವ phiX174 ವೈರಸ್‌ ಬಳಸಿಕೊಂಡು ಸ್ಟ್ಯಾನ್‌ಫೋರ್ಡ್ ವಿವಿ ಮತ್ತು ಆರ್ಕ್ ಸಂಸ್ಥೆಯ ವಿಜ್ಞಾನಿಗಳು ಪ್ರಯೋಗವನ್ನು ಶುರು ಮಾಡಿದ್ದರು. phiX174ರಲ್ಲಿ ಕೇವಲ 11 ಜೀನ್ಸ್‌ ಇರುವ ಕಾರಣ ಸಂಶೋಧನೆಗೆ ಸರಳವಾಗಿರುತ್ತದೆ ಎಂಬುದು ಇದರ ಉದ್ದೇಶ.

ಅತ್ತ ಸಾಂಪ್ರದಾಯಿಕ ವಿಧಾನದಲ್ಲಿ ಅಧ್ಯಯನ ನಡೆಸುವ ಬದಲು, ವಿಜ್ಞಾನಿಗಳು ಇವೋ ಎಂಬ ಪ್ರೋಗ್ರಾಂ ತಯಾರಿಸಿ, ಅದಕ್ಕೆ ಲಕ್ಷಾಂತರ ವೈರಸ್‌ಗಳ ಡೇಟಾ ಒದಗಿಸಿದ್ದರು. ಇದನ್ನು ಬಳಸಿಕೊಂಡು ಆ ಎಐ ಟೂಲ್‌ ನೂರಾರು ವೈರಸ್‌ಗಳನ್ನು ವಿನ್ಯಾಸ ಮಾಡಿತು. ಅದರ ಆಧಾರದಲ್ಲಿ ವಿಜ್ಞಾನಿಗಳು ಪ್ರಯೋಗಕ್ಕೆ ಇಳಿಸಿದ್ದು, ಇವೋ ಸೃಷ್ಟಿಸಿದ 16 ವೈರಸ್‌ಗಳು ನೈಸರ್ಗಿಕ ಬ್ಯಾಕ್ಟೀರಿಯಾ ನಾಶದಲ್ಲಿ ಯಶಸ್ವಿಯಾದವು. ಅಚ್ಚರಿಯೆಂದರೆ ಅವು ನೈಸರ್ಗಿಕ ವೈರಸ್‌ಗಳಿಗಿಂತಲೂ ಪರಿಣಾಮಕಾರಿಯಾಗಿದ್ದವು.

ಈ ಸಂಶೋಧನೆಯ ಬಗ್ಗೆ, 2008ರಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಜೀವಿಗಳನ್ನು ಸೃಷ್ಟಿಸಿದ್ದ ಜೆ. ಕ್ರೇಗ್ ವೆಂಟರ್ ಮಾತನಾಡಿ, ‘ಇದು ತ್ವರಿತವಾಗಿ ಪ್ರಯೋಗಗಳನ್ನು ಮಾಡಲು ಸಹಕಾರಿ ಎಂದು ಶ್ಲಾಘಿಸಿದ್ದಾರೆ.

ಉಪಯೋಗವೇನು?:

ರೋಗನಿರೋಧಕ ಶಕ್ತಿಯ ಕೊರತೆಯೇ ಇಂದಿನವರಲ್ಲಿ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ ಕೃತಕವಾಗಿ ವೈರಸ್‌ಗಳ ಸೃಷ್ಟಿ ಸಾಧ್ಯವಾದರೆ ಹಲವು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಎಐ ಸಾಧನಗಳನ್ನು ಬಳಸಿ ಇವುಗಳನ್ನು ತಯಾರಿಸುವುದರಿಂದ ತ್ವರಿತ ಸಂಶೋಧನೆ ಸಾಧ್ಯ.