ವಾಷಿಂಗ್ಟನ್: 24*7 ಕಾರ್ಯನಿರ್ವಹಿಸುವ ಮೊಟ್ಟಮೊದಲ ಚಾನೆಲ್ ಎನ್ನಿಸಿಕೊಂಡಿದ್ದ ಸಿಎನ್‌ಎನ್ ಸ್ಥಾಪಕ ಟೆಡ್ ಟರ್ನರ್ (87) ಅಮೆರಿಕದಲ್ಲಿರುವ ನಿಧನರಾಗಿದ್ದಾರೆ. ಒಹಾಯೋದಲ್ಲಿ ಜನಿಸಿದ್ದ ಇವರು, 1980ರಲ್ಲಿ ಸಿಎನ್‌ಎನ್ ಸ್ಥಾಪಿಸಿದ್ದರು. 1990-91ರ ಗಲ್ಫ್ ಯುದ್ಧದ ವರದಿಗಾರಿಕೆಯಿಂದಾಗಿ ಈ ಚಾನಲ್ ವಿಶ್ವಾದ್ಯಂತ ಗುರುತಿಸಿಕೊಂಡಿತ್ತು. ಟೆಡ್ ತಮ್ಮ ನೇರ ನುಡಿಯಿಂದಾಗಿ ‘ಮೌತ್ ಆಫ್ ಸೌತ್’ (ದಕ್ಷಿಣದ ಧ್ವನಿ) ಎಂದೇ ಖ್ಯಾತರಾಗಿದ್ದರು.
==ಸಮರ ಸಂಧಾನ ಪ್ರಗತಿ: ಸೆನ್ಸೆಕ್ಸ್ 940, ನಿಫ್ಟಿ 298 ಅಂಕ ನೆಗೆತ
ಮುಂಬೈ: ಇರಾನ್ ಯುದ್ಧ ಕೊನೆಗೊಳಿಸುವ ಮಾತುಕತೆ ಪ್ರಗತಿ, ಕಚ್ಚಾ ತೈಲ ಬೆಲೆ ಇಳಿಕೆಯ ಪರಿಣಾಮ ಷೇರುಪೇಟೆ ಚೇತರಿಕೆ ಹಾದಿಯಲ್ಲಿ ಸಾಗಿದೆ. ಬುಧವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 940 ಅಂಕ ಏರಿಕೆ ಕಂಡು 77, 958. 5 ರಲ್ಲಿ ಮುಕ್ತಾಯಗೊಂಡಿದೆ. ಇನ್ನು ನಿಫ್ಟಿ 298 ಅಂಕ ಹೆಚ್ಚಳಗೊಂಡು 24,330.9ರಲ್ಲಿ ಕೊನೆಗೊಂಡಿದೆ. ಹೀಗಾಗಿ ಹೂಡಿಕೆದಾರರ ಸಂಪತ್ತು ₹5.99 ಲಕ್ಷ ಕೋಟಿ ರು. ವೃದ್ಧಿ ಆಗಿದೆ.ರುಪಾಯಿ ಏರಿಕೆ:ಮತ್ತೊಂದೆಡೆ ಡಾಲರ್ ಎದುರು ರುಪಾಯಿ ಮೌಲ್ಯ 61 ಪೈಸೆ ಹೆಚ್ಚಳದೊಂದಿಗೆ 94.57ರಲ್ಲಿ ಅಂತ್ಯವಾಗಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕೆ ಕುಸಿದ ಹಿನ್ನೆಲೆ ಈ ಬೆಳವಣಿಗೆ ಆಗಿದೆ.==
ಪಕ್ಷ ಒಪ್ಪಿದವರು ಮಾತ್ರ ಬಿಜೆಪಿ ಸದಸ್ಯ: ಬಂಗಾಳ ಬಿಜೆಪಿಯಿಂದ ಫರ್ಮಾನು
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಬೆನ್ನಲ್ಲೇ, ‘ನಿಮ್ಮನ್ನು ನೀವೇ ಬಿಜೆಪಿ ಸದಸ್ಯ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಪಕ್ಷವು ನಿಮಗೆ ಸದಸ್ಯತ್ವ ನೀಡಿದ್ದರರಷ್ಟೇ ನಿಮಗೆ ಹಾಗೆ ಹೇಳಿಕೊಳ್ಳುವ ಅರ್ಹತೆ ಬರುತ್ತದೆ’ ಎಂದು ಬಂಗಾಳ ಬಿಜೆಪಿ ಫರ್ಮಾನು ಹೊರಡಿಸಿದೆ.ಗೆಲುವಿನ ಬೆನ್ನಲ್ಲೇ ಬಿಜೆಪಿಯವರು ಎಂದು ಹೇಳಿಕೊಂಡು ಹಲವರು ಹಿಂಸಾಚಾರಗಳಲ್ಲಿ ತೊಡಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಹೆಸರಿಗೆ ಕಳಂಕ ಬರದಂತೆ ತಡೆಯಲು ಈ ಘೋಷಣೆ ಮಾಡಲಾಗಿದೆ.
==ಮಾನಸ ಸರೋವರ ಯಾತ್ರೆ ಶುಲ್ಕ ₹2.09 ಲಕ್ಷಕ್ಕೆ ಏರಿಕೆ
ನೈನಿತಾಲ್: ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ವೆಚ್ಚವು ಶೇ.20ರಷ್ಟು ಹೆಚ್ಚಾಗಿದ್ದು, ಒಟ್ಟು ತೀರ್ಥಯಾತ್ರೆ ಶುಲ್ಕ 2.09 ಲಕ್ಷ ರು.ಗಳಿಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಈ ವರ್ಷದ ಯಾತ್ರೆ ಜು.4ರಂದು ಪ್ರಾರಂಭವಾಗಲಿದೆ. ಭಾರತೀಯ ಪ್ರದೇಶದ ಯಾತ್ರೆಯ ಒಟ್ಟು ವೆಚ್ಚ ಈಗ ಪ್ರತಿ ಯಾತ್ರಿಕರಿಗೆ 65,000 ರು.ಗಳಾಗಿದೆ. ಇನ್ನು ಟಿಬೆಟ್, ಚೀನಾ ಭಾಗದ ಶುಲ್ಕ ಪ್ರತ್ಯೇಕ. ಇದೆಲ್ಲ ಸೇರಿ ತೀರ್ಥಯಾತ್ರೆ ಶುಲ್ಕ ಕಳೆದ ವರ್ಷದ 1.74 ಲಕ್ಷ ರು.ಗಳಿಂದ ಈ ವರ್ಷ 2.09 ಲಕ್ಷ ರು.ಗಳಿಗೆ ಏರಿಕೆಯಾಗಿದೆ. ಈ ವರ್ಷ ಯಾತ್ರೆಯಲ್ಲಿ 50 ಯಾತ್ರಿಕರನ್ನು ಹೊಂದಿರುವ 10 ಬ್ಯಾಚ್‌ಗಳು ಭಾಗವಹಿಸಲಿವೆ.
==ಜೈವಿಕ ಭಯೋತ್ಪಾದನೆ: ಐಸಿಸ್ ನಂಟಿನ ಮೂವರ ವಿರುದ್ಧ ಆರೋಪಪಟ್ಟಿ
ರೈಸಿನ್‌ನಿಂದ ಸಾಮೂಹಿಕ ವಿಷಪ್ರಾಶನಕ್ಕೆ ಪ್ಲ್ಯಾನ್
ನವದೆಹಲಿ: ಐಸಿಸ್ ಜತೆ ಸೇರಿ, ಜೈವಿಕ ವಿಷವನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ವಿಷಪ್ರಾಶನ ಮಾಡುವ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಓರ್ವ ವೈದ್ಯ ಸೇರಿದಂತೆ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.ಹೈದರಾಬಾದ್ ಮೂಲದ ಡಾ. ಸೈಯದ್ ಅಹ್ಮದ್ ಮೊಹಿಯುದ್ದೀನ್ ಮತ್ತು ಸಹ ಆರೋಪಿಗಳಾದ ಉತ್ತರ ಪ್ರದೇಶದ ಆಜಾದ್ ಮತ್ತು ಮೊಹಮ್ಮದ್ ಸುಹೇಲ್ ವಿರುದ್ಧ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶೇಷ ಎನ್‌ಐಎ ಕೋರ್ಟ್ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳು ಜಿಹಾದ್ ನಡೆಸಲು ಜೈವಿಕ ಭಯೋತ್ಪಾದನೆಯ ಅಸ್ತ್ರ ಕಂಡುಕೊಂಡಿದ್ದರು. ಐಸಿಸ್‌ನ ದುಷ್ಟ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಕ್ಯಾಸ್ಟರ್ ಬೀಜಗಳಿಂದ ತಯಾರಾದ ಅತ್ಯಂತ ವಿಷಕಾರಿ ವಸ್ತುವಾದ ರೈಸಿನ್ ಅನ್ನು ಬಳಸಿ ಸಾಮೂಹಿಕ ವಿಷಪ್ರಾಶನಕ್ಕೆ ಯೋಜನೆ ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ.==
ಇಂದು ನಿತೀಶ್ ಪುತ್ರ ನಿಶಾಂತ್ ಸಚಿವರಾಗಿ ಶಪಥಪಟನಾ: ಬಿಹಾರದ ನಿರ್ಗಮಿತ ಸಿಎಂ, ರಾಜ್ಯಸಭಾ ಸದಸ್ಯ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಗುರುವಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ರಾಜಕೀಯದಿಂದ ದೂರವೇ ಉಳಿದಿದ್ದ ನಿಶಾಂತ್ ಕಳೆದ ಮಾರ್ಚ್‌ನಲ್ಲಿ ಜೆಡಿಯು ಸೇರಿದ್ದರು. ಇದೀಗ ಅವರು ಹಾಲಿ ಸಿಎಂ ಸಾಮ್ರಾಟ್ ಅವರ ಸಂಪುಟದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿರುವ 27 ಸಚಿವರಲ್ಲಿ ಒಬ್ಬರು ಎಂದು ಮೂಲಗಳಿಂದ ತಿಳಿದು ಬಂದಿದೆ. ಇವರ ಜತೆಗೆ ಜೆಡಿಯುನ ಇನ್ನೂ 11 ಮಂದಿ ಶಪಥ ಸ್ವೀಕರಿಸುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಜೆಪಿ ನಡ್ಡಾ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.