ಮಾಲಿನ್ಯದಿಂದಾಗಿ ದಿಲ್ಲಿಯಲ್ಲಿ ಈಗ ಉಸಿರಾಟ ಸಮಸ್ಯೆ ಏರಿಕೆ

| Published : Nov 20 2024, 12:35 AM IST

ಮಾಲಿನ್ಯದಿಂದಾಗಿ ದಿಲ್ಲಿಯಲ್ಲಿ ಈಗ ಉಸಿರಾಟ ಸಮಸ್ಯೆ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತ ವಾಯುಗುಣಮಟ್ಟದ ಹದಗೆಡುವಿಕೆ ಮುಂದುವರೆದಿದ್ದು ರೈಲು, ವಿಮಾನ ಸಂಚಾರ ಹಾಗೂ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.

- ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ 300% ಏರಿಕೆ- ರೈಲು, ವಿಮಾನ ಸಂಚಾರ ಅಸ್ತವ್ಯಸ್ತ

ಶುದ್ಧ ಗಾಳಿ: ರಾಜ್ಯಕ್ಕೆ ವಿಜಯಪುರ ಟಾಪ್‌

ನವದೆಹಲಿ: ಉತ್ತರ ಭಾರತದಾದ್ಯಂತ ವಾಯು ಮಾಲಿನ್ಯ ಜೋರಾಗಿದ್ದು, ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 500 ತಲುಪಿರುವ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶವು ಅಕ್ಷರಶಃ ನಲುಗಿದೆ. ಮತ್ತೊಂದೆಡೆ ದಕ್ಷಿಣದ ನಗರಗಳು ವಾಯುಗುಣಮಟ್ಟದಲ್ಲಿ ಮುಂದಿದ್ದು, ಕೇವಲ 37 ಎಕ್ಯುಐ ಹೊಂದಿರುವ ವಿಜಯಪುರವು ಮಂಗಳವಾರ ಕರ್ನಾಟಕ ಶುದ್ಧ ಗಾಳಿಯ ನಗರ ಎನ್ನಿಸಿಕೊಂಡಿದೆ. ಇದರ ನಂತರದಲ್ಲಿ ಬಾಗಲಕೋಟೆ, ಚಾಮರಾಜನಗರಗಳಿವೆ. ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು 96 ಇದ್ದು ಸಮಾಧಾನಕರ ಹಂತದಲ್ಲಿದೆ, ಯಾದಗಿರಿ ಸೂಚ್ಯಂಕವು 155ರಲ್ಲಿದ್ದು ಸಾಧಾರಣ ಗುಣಮಟ್ಟವಿದೆ ಎಂದು ಮಂಗಳವಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಗುಣಮಟ್ಟ ದತ್ತಾಂಶ ಹೇಳಿದೆ.

--

ಕರ್ನಾಟಕ ನಗರಗಳ ವಾಯುಗುಣಮಟ್ಟ

ನಗರ ವಾಯು ಗುಣಮಟ್ಟ ಸೂಚ್ಯಂಕ ಸ್ಥಿತಿ

ವಿಜಯಪುರ 37 ಉತ್ತಮ

ಬಾಗಲಕೋಟೆ 42 ಉತ್ತಮ

ಚಾಮರಾಜನಗರ 44 ಉತ್ತಮ

ಕಲಬುರಗಿ 52 ಸಮಾಧಾನಕರ

ಮಡಿಕೇರಿ 53 ಸಮಾಧಾನಕರ

ಬೆಂಗಳೂರು 96 ಸಮಾಧಾನಕರ

ಹುಬ್ಬಳ್ಳಿ 138 ಸಾಧಾರಣ

ಯಾದಗಿರಿ 155 ಸಾಧಾರಣ--ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತ ವಾಯುಗುಣಮಟ್ಟದ ಹದಗೆಡುವಿಕೆ ಮುಂದುವರೆದಿದ್ದು ರೈಲು, ವಿಮಾನ ಸಂಚಾರ ಹಾಗೂ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಸಾಲದ್ದಕ್ಕೆ ಜನರ ಉಸಿರಾಟಕ್ಕೂ ಸಮಸ್ಯೆ ಆಗುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ.300ರಷ್ಟು ಏರಿದೆ.

ದಿಲ್ಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಗಂಭೀರ ಎಂದು ಪರಿಗಣಿಸಲಾಗುವ 488 ಅಂಕ ತಲುಪಿದೆ. ಈ ಪೈಕಿ ದಿಲ್ಲಿಯ ಅಲಿಪುರ ಹಾಗೂ ಸೋನಿಯಾ ವಿಹಾರ ಪ್ರದೇಶದಲ್ಲಿ 500 ಅಂಕ ದಾಖಲಾಗಿದೆ.

‘ಇದರಿಂದಾಗಿ ಉಸಿರಾಟ ಸಮಸ್ಯೆಯಿಂದ ಎಮರ್ಜೆನ್ಸಿ ವಾರ್ಡುಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವಾಡಿಕೆಗಿಂದ ಶೇ.15ರಷ್ಟು ಹೆಚ್ಚಿದೆ ಹಾಗೂ ಹೊರರೋಗಿ ವಿಭಾಗದಲ್ಲಿ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಶೇ.300ರಷ್ಟು ಜಾಸ್ತಿಯಾಗಿದೆ’ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ದಿಲ್ಲಿ ಸರ್ಕಾರವು ಉಸಿರಾಟ ಸಮಸ್ಯೆ ಚಿಕಿತ್ಸೆಗೆ ವೈದ್ಯರ ತಂಡಗಳನ್ನು ರಚಿಸಬೇಕು ಎಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಿದೆ. ಇದೇ ವೇಳೆ, ವಾಯುಮಾಲಿನ್ಯ ಸಮಸ್ಯೆ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಹಾಗೂ ಕೃತಕ ಮಳೆಗೆ ಕೇಂದ್ರ ಸರ್ಕಾರ ಅನುಮತಿಸಬೇಕು ಎಂದು ದಿಲ್ಲಿ ಸಚಿವ ಗೋಪಾಲ ರಾಯ್‌ ಆಗ್ರಹಿಸಿದ್ದಾರೆ.

ಗೋಚರತೆ ಕುಸಿತ, ಅಪಘಾತ ಹೆಚ್ಚಳ:

ಹವಾಮಾನ ಇಲಾಖೆಯ ಪ್ರಕಾರ ದೆಹಲಿಯ ಕನಿಷ್ಠ ತಾಪಮಾನ 16.2 ಡಿಗ್ರಿಯಿಂದ ನಿಂದ 12.3 ಡಿಗ್ರಿಗೆ ಕುಸಿದಿದ್ದು, ಇದು ಈ ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ. ಗೋಚರತೆಯೂ ಕೂಡ 400 ಮೀ.ಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಗೋಚರತೆ ಕುಸಿದ ಕಾರಣ ದಿಲ್ಲಿ ಹೊರವಲಯದ ಅನೇಕ ಕಡೆ ಹೈವೇಗಳಲ್ಲಿ ಸರಣಿ ವಾಹನ ಅಪಘಾತಗಳು ಸಂಭವಿಸಿವೆ. ಇಬ್ಬರು ಸಾವನ್ನಪ್ಪಿದ್ದಾರೆ.ರೈಲು, ವಿಮಾನ ವಿಳಂಬ:ಗೋಚರತೆ ಸಮಸ್ಯೆಯಿಂದಾಗಿ 22 ರೈಲುಗಳು ತಡವಾಗಿ ಸಂಚರಿಸುತ್ತಿದ್ದು, ವಿಮಾನಗಳ ಮಾರ್ಗ ಬದಲಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅರ್ಧದಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ದಿಲ್ಲಿ ಜತೆಗೆ ಹರ್ಯಾಣದ ಗುರುಗ್ರಾಮ ಹಾಗೂ ಉತ್ತರಪ್ರದೇಶದ ಗಾಜಿಯಾಬಾದ್‌ ಸೇರಿದಂತೆ ರಾಷ್ಟ್ರರಾಜಧಾನಿ ವಲಯದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು, 12 ತರಗತಿ ವರೆಗೆ ಆನ್‌ಲೈನ್‌ ಕ್ಲಾಸ್‌ ನಡೆಸಲಾಗುತ್ತಿದೆ.ಕೋರ್ಟ್‌ ಕೂಡ ವರ್ಚುವಲ್:ವಾಯುಮಾಲಿನ್ಯ ಕಾರಣ ಕೋರ್ಟುಗಳು ದಿಲ್ಲಿ ಹಾಗೂ ಸುತ್ತಮುತ್ತಲಿನ ಕೋರ್ಟುಗಳು ವರ್ಚುವಲ್‌ ಕಲಾಪ ನಡೆಸಬಹುದು ಎಂದು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.ವಾಯುಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ 4ನೇ ಹಂತದ ಗ್ರಾಪ್‌ (ಮಾಲಿನ್ಯ ನಿಯಂತ್ರಣ ಕ್ರಿಯಾ ಯೋಜನೆ) ಜಾರಿಗೊಳಿಸಲಾಗಿದೆ. ಇದರನ್ವಯ ಅಗತ್ಯ ವಸ್ತುಗಳನ್ನು ಪೂರೈಸುವ ಹಾಗೂ ಮಾಲಿನ್ಯಕಾರಕವಲ್ಲದ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಟ್ರಕ್‌ಗಳ ದೆಹಲಿ ಪ್ರವೇಶ, ದುರಸ್ತಿ ಕಾರ್ಯಗಳನ್ನು ನಿರ್ಬಂಧಿಸಲಾಗಿದ್ದು, ಶಾಲೆಗಳನ್ನೂ ಮುಚ್ಚಲಾಗಿದೆ.