ಸಾರಾಂಶ
ವಾಷಿಂಗ್ಟನ್: ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಆದ ಕ್ರೋಮ್ ಅನ್ನು ಮಾರಾಟ ಮಾಡುವಂತೆ ಗೂಗಲ್ ಸಂಸ್ಥೆಗೆ ಅಮೆರಿಕ ಸರ್ಕಾರ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಬ್ಲೂಂಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದು ಖಚಿತವಾದಲ್ಲಿ ಹೊಸದೊಂದು ಕಾನೂನು ಹೋರಾಟದ ಜೊತೆಗೆ ಗೂಗಲ್ ತನ್ನ ದೊಡ್ಡ ಆದಾಯದ ಮೂಲವೊಂದನ್ನು ಕಳೆದುಕೊಳ್ಳಬೇಕಾಗಿ ಬರಲಿದೆ ಎನ್ನಲಾಗಿದೆ.ಆನ್‌ಲೈನ್ ಜಾಹೀರಾತು ವಿಷಯದಲ್ಲಿ ಗೂಗಲ್‌ನ ಪಾರಮ್ಯ ಹೊಂದಿರುವ ಬಗ್ಗೆ ಈ ಹಿಂದೆ ತನಿಖೆ ನಡೆಸಿದ್ದ ಅಮೆರಿಕದ ನ್ಯಾಯಾಲಯ, ‘ಗೂಗಲ್ ಆ್ಯಂಟಿಟ್ರಸ್ಟ್’ ನಿಯಮಗಳನ್ನು ಉಲ್ಲಂಘಿಸಿಸಿದೆ. ಗೂಗಲ್ ಒಂದು ಏಕಸ್ವಾಮ್ಯದ ಸಂಸ್ಥೆ. ಜೊತೆಗೆ ತನ್ನ ಏಕಸ್ವಾಮ್ಯ ಕಾಪಾಡಿಕೊಳ್ಳುವಂಥ ಕ್ರಮಗಳನ್ನು ಅನುಸರಿಸಿದೆ’ ಎಂದು ತೀರ್ಪು ನೀಡಿತ್ತು.ಇದರ ಮುಂದುವರೆದ ಭಾಗವಾಗಿ ಅಮೆರಿಕದ ನ್ಯಾಯಾಂಗ ಇಲಾಖೆಯು, ಈ ಹಿಂದೆ ಗೂಗಲ್ ವಿರುದ್ಧ ತೀರ್ಪು ನೀಡಿದ್ದ ನ್ಯಾ. ಅಮಿತ್ ಮೆಹ್ತಾಗೆ, ‘ಕ್ರೋಮ್ ಅನ್ನು ಮಾರಾಟ ಮಾಡುವಂತೆ ಗೂಗಲ್‌ಗೆ ಸೂಚಿಸಿ’ ಎಂಬ ಸಂದೇಶ ರವಾನಿಸುವ ಸಾಧ್ಯತೆ ಇದೆ. ಜೊತೆಗೆ ಗೂಗಲ್‌ನ ಆ್ಯಂಡ್ರಾಯ್ಡ್ ಸಿಸ್ಟಮ್ ವಿರುದ್ಧ ಮತ್ತು ಅದರ ಕೃತಕ ಬುದ್ಧಿಮತ್ತೆ ವ್ಯವಸ್ಥೆ ವಿರುದ್ಧ ಕ್ರಮಕ್ಕೂ ಸೂಚಿಸುವ ಸಾಧ್ಯತೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.
ಕ್ರಮ ಏಕೆ?:ಯಾವುದೇ ಸಂಸ್ಥೆಯೊಂದು ಯಾವುದೇ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹೊಂದಿದ್ದರೆ, ಇತರರ ಬೆಳವಣಿಗೆಗೆ ತಡೆಯಾಗಿದ್ದರೆ ಅಂಥ ಬೆಳವಣಿಗೆ ತಡೆಯಲು ಆ್ಯಂಟಿಟ್ರಸ್ಟ್ ಕಾಯ್ದೆ ಬಳಸಿ ಅಂಥ ಸಂಸ್ಥೆ ವಿಭಜಿಸಲು ಅವಕಾಶ ಇರುತ್ತದೆ. ಗೂಗಲ್ ಕ್ರೋಮ್, ಜಗತ್ತಿನ ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಶೇ.65ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಅಮೆರಿಕದಲ್ಲಿ ಶೇ.58ರಷ್ಟು ಪಾಲು ಹೊಂದಿದೆ.