ಇಲ್ಲಿನ ವಾಯುಗುಣಮಟ್ಟ (ಎಕ್ಯುಐ) ಭಾನುವಾರ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದು, ಭಾನುವಾರ ಸರಾಸರಿ ವಾಯುಗುಣಮಟ್ಟ ಸೂಚ್ಯಂಕವು 459ಕ್ಕೆ ಕುಸಿದಿದೆ. ದಿಲ್ಲಿಯ ವಿವಿಧ ಪ್ರದೇಶಗಳ ಪೈಕಿ ಬವಾನಾ ಎಂಬಲ್ಲಿ 497ಕ್ಕೆ ಕುಸಿತ ಕಂಡಿದೆ.
- ಬವಾನಾದಲ್ಲಿ ಎಕ್ಯುಐ 497ಕ್ಕೆ ಕುಸಿತ
- ಇದು ದಿನಕ್ಕೆ 23 ಸಿಗರೇಟು ಸೇವನೆಗೆ ಸಮ- ಗೋಚರತೆ ಕುಸಿದು ಹಲವೆಡೆ ಅಪಘಾತನವದೆಹಲಿ: ಇಲ್ಲಿನ ವಾಯುಗುಣಮಟ್ಟ (ಎಕ್ಯುಐ) ಭಾನುವಾರ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದು, ಭಾನುವಾರ ಸರಾಸರಿ ವಾಯುಗುಣಮಟ್ಟ ಸೂಚ್ಯಂಕವು 459ಕ್ಕೆ ಕುಸಿದಿದೆ. ದಿಲ್ಲಿಯ ವಿವಿಧ ಪ್ರದೇಶಗಳ ಪೈಕಿ ಬವಾನಾ ಎಂಬಲ್ಲಿ 497ಕ್ಕೆ ಕುಸಿತ ಕಂಡಿದೆ.
ಎಕ್ಯುಐ 400ಕ್ಕಿಂತ ಹೆಚ್ಚು ದಾಖಲಾದರೆ ‘ಅತಿ ಗಂಭೀರ’ ಎಂದು ಪರಿಗಣಿಸಲಾಗುತ್ತದೆ ಹಾಗೂ ಒಬ್ಬ ವ್ಯಕ್ತಿ ದಿನಕ್ಕೆ 23 ಸಿಗರೇಟು ಸೇದುವುದಕ್ಕೆ ಸಮನಾಗಿರುತ್ತದೆ.ಹೊಗೆ ಮಿಶ್ರಿತ ವಾತಾವರಣದಿಂದ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಸರಾಗವಾಗಿ ಉಸಿರಾಡುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಗೋಚರತೆ ಬೆಳಗ್ಗೆ 100 ಮೀ.ಗೆ ಕುಸಿದ ಕಾರಣ ದಿಲ್ಲಿ ಸುತ್ತಲಿನ ಹರ್ಯಾಣ ಹಾಗೂ ಉತ್ತರ ಪ್ರದೇಶದ ಕೆಲವೆಡೆ ವಾಹನ ಅಪಘಾತ ಸಂಭವಿಸಿವೆ.
ನಿರ್ಬಂಧಗಳು ಜಾರಿಯಲ್ಲಿ:ಈಗಾಗಲೇ ದೆಹಲಿಯಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿದ್ದು, ಶಾಲೆಗಳಿಗೆ ಹೈಬ್ರಿಡ್ ಬದ್ಧತಿಯಲ್ಲಿ ತರಗತಿಗಳನ್ನು ನಡೆಸಲು ಸೂಚನೆ ಹೊರಡಿಸಲಾಗಿದೆ. ಅನಗತ್ಯ ಕಟ್ಟಡ ಕಾಮಗಾರಿ, ಗಣಿಗಾರಿಕೆ, ಕಲ್ಲು ಕ್ವಾರಿ, ಡೀಸೆಲ್ ವಾಹನಗಳ ಚಾಲನೆಯನ್ನು ನಗರದಲ್ಲಿ ನಿಷೇಧಿಸಲಾಗಿದೆ.
ಬವಾನಾದಲ್ಲಿ ಅತ್ಯಂತ ಕನಿಷ್ಠ:ದೆಹಲಿಯ ಒಳಗಿರುವ ಬವಾನಾದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆ ಹೊತ್ತಿಗೆ ಗಾಳಿ ಗುಣಮಟ್ಟ ಸೂಚ್ಯಂಕವು 497ಕ್ಕೆ ಕುಸಿದು ಅತ್ಯಂತ ಗಂಭೀರ ಹಂತಕ್ಕೆ ತಲುಪಿತ್ತು. ಅದೇ ರೀತಿ ನರೆಲಾ ಎಂಬಲ್ಲಿ 492, ಒಕ್ಲಾ 2ನೇ ಹಂತದಲ್ಲಿ 474 ದಾಖಲಾಗಿತ್ತು. ಇವೆಲ್ಲವೂ ಅತ್ಯಂತ ಗಂಭೀರ ಹಂತದ್ದಾಗಿದೆ.==
ಜನವರಿಯಲ್ಲಿ ಟೀವಿ ದರ ಶೇ.3-4ರಷ್ಟು ಹೆಚ್ಚಳ?- ಚಿಪ್ ಕೊರತೆ, ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್- ಹೊಸ ವರ್ಷಕ್ಕೆ ಟೀವಿ ದರ ಹೆಚ್ಚಳ ಶಾಕ್ ಸಂಭವ
ನವದೆಹಲಿ: ಜಿಎಸ್ಟಿ ಕಡಿತದ ಖುಷಿಯಲ್ಲಿ ಮುಂದಿನ ತಿಂಗಳಲ್ಲಿ ಟೀವಿ ಖರೀದಿಸುವ ಯೋಚನೆಯಿದ್ದರೆ ನಿಮ್ಮ ಕಿಸೆಗೆ ದರ ಏರಿಕೆ ಬಿಸಿ ತಟ್ಟುವುದು ಖಚಿತ. ಏಕೆಂದರೆ ಜನವರಿಯಿಂದ ಎಲ್‌ಇಡಿ ಟೀವಿ ದರ ಶೇ.3ರಿಂದ 4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್ ಬೆಲೆ ಹೆಚ್ಚಳ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ಟೀವಿ ದರ ಏರಿಕೆ ಅನಿವಾರ್ಯ ಎಂದು ಉತ್ಪಾದಕರು ತಿಳಿಸಿದ್ದಾರೆ.ದೇಶದಲ್ಲಿ ಉತ್ಪಾದನೆಯಾಗುವ ಎಲ್‌ಇಡಿ ಟೀವಿಗಳಲ್ಲಿ ಶೇ.30ರಷ್ಟು ಭಾಗ ಮಾತ್ರ ಮೇಡ್ ಇನ್ ಇಂಡಿಯಾದ್ದು. ಓಪನ್ ಸೆಲ್, ಸೆಮಿಕಂಡಕ್ಟರ್ ಚಿಪ್‌ಗಳು ಹಾಗೂ ಮದರ್ ಬೋರ್ಡ್‌ಗಳನ್ನು ವಿದೇಶಗಳಿಂದಲೇ ತರಿಸಿಕೊಳ್ಳಲಾಗುತ್ತದೆ. ರುಪಾಯಿ ಮೌಲ್ಯ ಕುಸಿತದಿಂದಾಗಿ ಬಿಡಿಭಾಗಗಳ ಆಮದು ದುಬಾರಿಯಾಗುತ್ತಿದೆ.ಈ ನಡುವೆ, ಕಳೆದ ಮೂರ್ನಾಲ್ಕು ತಿಂಗಳಿಂದ ಎಐ ಸರ್ವರ್‌ಗಳಿಗೆ ಹೈಬ್ಯಾಂಡ್‌ವಿಡ್ತ್ ಮೆಮೊರಿ (ಎಚ್‌ಬಿಎಂ) ಚಿಪ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೂರೈಕೆ ಅಷ್ಟಿಲ್ಲ. ಹೀಗಾಗಿ ಡಿಆರ್‌ಎಎಂ, ಫ್ಲಾಶ್ ಸೇರಿ ಎಲ್ಲ ಮೆಮೊರಿ ಚಿಪ್‌ಗಳ ದರ ಹೆಚ್ಚಾಗಿದೆ. ಇದರಿಂದ ಚಿಪ್ ಉತ್ಪಾದಕರು ಲಾಭದಾಯಕವಾದ ಎಐ ಚಿಪ್‌ಗಳಿಗೆ ಆದ್ಯತೆ ನೀಡಲು ಆರಂಭಿಸಿದ ಹಿನ್ನೆಲೆಯಲ್ಲಿ ಟೀವಿಯಂಥ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕರಿಗೆ ಸಮಸ್ಯೆ ಸೃಷ್ಟಿಸಿದೆ.
ಹಯರ್ ಅಪ್ಲಯನ್ಸಸ್ ಇಂಡಿಯಾ ಅಧ್ಯಕ್ಷ ಎನ್.ಎಸ್. ಸತೀಶ್ ಅವರು ಎಲ್‌ಇಡಿ ಟೀವಿ ದರ ಹೆಚ್ಚಳವನ್ನು ಖಚಿತಪಡಿಸಿದ್ದಾರೆ. ಕೆಲ ಟೀವಿ ಉತ್ಪಾದಕರು ಡೀಲರ್‌ಗಳಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಇನ್ನು ಪ್ರಮುಖ ಟೀವಿ ಉತ್ಪಾದಕ ಕಂಪನಿಯಾದ ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈ ವಿ. ಕೂಡ ಕಳೆದ ಮೂರು ತಿಂಗಳಲ್ಲಿ ಚಿಪ್‌ಗಳ ದರ ಶೇ.500ರಷ್ಟು ಹೆಚ್ಚಾಗಿದ್ದು, ಜನವರಿಯಿಂದ ಟೀವಿ ದರ ಶೇ.7ರಿಂದ 10ರಷ್ಟು ಹೆಚ್ಚಳ ಮಾಡುವ ಸ್ಥಿತಿ ಇದೆ ಎಂದು ತಿಳಿಸಿದೆ.==
ಶಬರಿಮಲೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿದ್ದ 81 ಭಕ್ತರ ರಕ್ಷಣೆಪಟ್ಟಣಂತಿಟ್ಟ (ಕೇರಳ): ಶಬರಿಮಲೆಯಲ್ಲಿ ಆರೋಗ್ಯ ಇಲಾಖೆ ಸ್ಥಾಪಿಸಿರುವ ವೈದ್ಯಕೀಯ ನೆರವು ಕೇಂದ್ರಗಳು ಹೃದಯಾಘಾತಕ್ಕೆ ತುತ್ತಾಗಿದ್ದ 81 ಯಾತ್ರಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ಯಾತ್ರೆ ಆರಂಭವಾದ ಹಿನ್ನೆಲೆಯಲ್ಲಿ ಭಕ್ತಾದಿಗಳ ನೆರವಿಗಾಗಿ ಸರ್ಕಾರ 22 ತುರ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿತ್ತು. ತಜ್ಞ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವರದಿಯಾದ ಒಟ್ಟು 103 ಹೃದಯಾಘಾತ ಪ್ರಕರಣಗಳಲ್ಲಿ, 81 ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಹೃದಯಸ್ತಂಭನಕ್ಕೆ (ಕಾರ್ಡಿಯಾಕ್ ಅರೆಸ್ಟ್) ಒಳಗಾದ 25 ಮಂದಿಯಲ್ಲಿ 6 ಜನರನ್ನು ಬದುಕಿಸಲಾಗಿದೆ. ಇಲ್ಲಿಯವರೆಗೆ, ಶಬರಿಮಲೆ ಮತ್ತು ಹತ್ತಿರದ ಆಸ್ಪತ್ರೆಗಳಲ್ಲಿ ಒಟ್ಟು 95,385 ಹೊರರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.