ಸಾರಾಂಶ
ಜಗತ್ತಿನಾದ್ಯಂತ ಮೈಕ್ರೋಸಾಫ್ಟ್‌ನ ಕ್ಲೌಡ್ ಸಂಬಂಧಿ ಸಾಫ್ಟ್‌ವೇರ್ ಸೇವೆಗಳು ಜು.19ರಂದು ಸ್ಥಗಿತಗೊಂಡು ಉಂಟಾಗಿದ್ದ ‘ಐಟಿ ತಲ್ಲಣ’ ಶನಿವಾರವೂ ಕೆಲವೆಡೆ ಮುಂದುವರೆದಿದೆ.
ನವದೆಹಲಿ: ಜಗತ್ತಿನಾದ್ಯಂತ ಮೈಕ್ರೋಸಾಫ್ಟ್‌ನ ಕ್ಲೌಡ್ ಸಂಬಂಧಿ ಸಾಫ್ಟ್‌ವೇರ್ ಸೇವೆಗಳು ಜು.19ರಂದು ಸ್ಥಗಿತಗೊಂಡು ಉಂಟಾಗಿದ್ದ ‘ಐಟಿ ತಲ್ಲಣ’ ಶನಿವಾರವೂ ಕೆಲವೆಡೆ ಮುಂದುವರೆದಿದೆ. ಎಲ್ಲವನ್ನೂ ಸಹಜ ಸ್ಥಿತಿಗೆ ತರಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದ್ದರೂ, ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರವೂ ಸೇವೆಗಳು ತೀವ್ರ ವ್ಯತ್ಯಯವಾಗಿವೆ.
ವಿಶೇಷವಾಗಿ ಇಂಡಿಗೋ ವಿಮಾನಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಶನಿವಾರವೂ ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನೇ ಪ್ರಯಾಣಿಕರಿಗೆ ನೀಡಿದ್ದಾರೆ. ಡಿಜಿಯಾತ್ರಾ ವೆಬ್ ಚೆಕ್-ಇನ್ ಸ್ಥಗಿತಗೊಂಡಿದೆ. ಹೀಗಾಗಿ ಏರ್‌ಲೈನ್ಸ್ ಕೌಂಟರ್‌ಗಳಲ್ಲಿ ಉದ್ದುದ್ದ ಕ್ಯೂಗಳು ಕಂಡುಬಂದವು. ಬೋರ್ಡಿಂಗ್ ಪ್ರಕ್ರಿಯೆಯೂ ಮ್ಯಾನ್ಯುವಲ್ ಮಾದರಿಯಲ್ಲಿ ನಡೆದಿದೆ. ಹೀಗಾಗಿ ವಿಮಾನಗಳು ತಡವಾಗಿ ಹಾರಾಟ ನಡೆಸಿವೆ.
ಆದರೆ, ವಿಮಾನ ನಿಲ್ದಾಣಗಳಲ್ಲಿ ಶನಿವಾರ ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ ಬಂದಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಶುಕ್ರವಾರ ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಸಮಸ್ಯೆಯಿಂದ ಭಾರತದಲ್ಲಿ ಸುಮಾರು 200 ವಿಮಾನಗಳ ಹಾರಾಟ ರದ್ದಾಗಿತ್ತು. ಜಗತ್ತಿನಾದ್ಯಂತ ವಿಮಾನ ನಿಲ್ದಾಣ, ಬ್ಯಾಂಕ್, ಐಟಿ ಕಂಪನಿಗಳು ಮುಂತಾದೆಡೆ ತೀವ್ರ ಸಮಸ್ಯೆಯಾಗಿತ್ತು.