ಸಾರಾಂಶ
ಮುಂಬೈ: ಬುಧವಾರ ಮುಂಬೈನ ಜುಹು ಪ್ರದೇಶದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಹಿಂದಿನಿಂದ ಬಂದ ಮುಂಬೈ ನಗರ ಸಾರಿಗೆಯ ‘ಬೆಸ್ಟ್’ ಬಸ್ ಡಿಕ್ಕಿ ಹೊಡೆದಿದೆ. ಆದರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಡಿಕ್ಕಿ ಬಳಿಕ ಅವರ ಸಿಬ್ಬಂದಿ ಕಾರಿನಿಂದ ಇಳಿದಿದಿದ್ದಾರೆ. ಆದರೆ ಹೀಗಾಗಿ ಅಪಘಾತದ ವೇಳೆ ನಟಿ ಕಾರಿನಲ್ಲಿ ಇರಲಿಲ್ಲ . ಕಾರಿನ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಐಶ್ವರ್ಯಾ ಅವರದ್ದೇ ಎಂದು ತಿಳಿದುಬಂದಿದೆ. ಅಪಘಾತ ಲಘು ಪ್ರಮಾಣದಲ್ಲಿ ಆಗಿದ್ದರಿಂದ ಕೆಲ ಹೊತ್ತು ಬಳಿಕ ಅಲ್ಲಿಂದ ಕಾರು ಮುಂದೆ ಸಾಗಿತು.
ಸ್ವದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿ
ನವದೆಹಲಿ: ಭಾರತವು ಇದೇ ಮೊದಲ ಬಾರಿಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ದೇಶೀಯವಾಗಿ ಅಭಿವೃದ್ಧಿಪಿಡಿಸಿದ್ದು, ಅಕ್ಟೋಬರ್‌ನಲ್ಲಿ ಪ್ರಾಯೋಗಿಕವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದನ್ನು ಅಳವಡಿಸಲಾಗುವುದು.ವೈದ್ಯಕೀಯ ಉಪಕರಣಗಳಿಗಾಗಿ ವಿದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಚಿಕಿತ್ಸಾ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಎಂಆರ್‌ಐ ಯಂತ್ರವನ್ನು ಇದೀಗ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.ಈ ಸಂಬಂಧ ಏಮ್ಸ್ ಮತ್ತು ಸೊಸೈಟಿ ಆಫ್ ಅಪ್ಲೈಡ್ ಮೆಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಆ್ಯಂಡ್ ರಿಸರ್ಚ್(ಎಸ್‌ಎಎಂಇಇಆರ್) ನಡುವೆ ಒಡಂಬಡಿಕೆಗೆ ಸಹಿಹಾಕಲಾಗಿದೆ.ಎಸ್‌ಎಎಂಇಇಆರ್ ಈಗಾಗಲೇ ಮುಂಬೈನಲ್ಲಿ ಸ್ವಾಯತ್ತ ಸಂಶೋಧನಾ ಮತ್ತು ಅಭಿವೃದ್ಧಿ ಲ್ಯಾಬೊರೇಟರಿಯನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಡಿಪಾರ್ಟ್‌ಮೆಂಟ್‌ನಡಿ ಸ್ಥಾಪಿಸಿದೆ. ಇದರ ಮೂಲಕ 1.5 ಟೆಸ್ಲಾ ಎಂಆರ್‌ಐ ಸ್ಕ್ಯಾನರ್ ಅನ್ನು ಅಭಿವೃದ್ಧಿಪಡಿಸಲಾಗಿದೆ.ಐಸಿಯುಗಳು, ರೋಬಾಟಿಕ್ಸ್, ಎಂಆರ್‌ಐಗಳು ಹೀಗೆ ಕ್ರಿಟಿಕಲ್ ಕೇರ್‌ನಲ್ಲಿ ಬಳಸಲು ಬಹುತೇಕ ವೈದ್ಯಕೀಯ ಉಪಕರಣಗಳನ್ನು ಅಂದರೆ ಶೇ.80ರಿಂದ 90ರಷ್ಟು ಉಪಕರಣಗಳನ್ನು ಭಾರತವು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ವೈದ್ಯಕೀಯ ಉಪಕರಣಗಳ ನಿರ್ಮಾಣದಲ್ಲೂ ಆತ್ಮನಿರ್ಭರತೆಯನ್ನು ಸಾಧಿಸಲು ಒತ್ತು ನೀಡುತ್ತಿದೆ. ಇದರ ಭಾಗವಾಗಿ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 1.5 ಟೆಸ್ಲಾ ಎಂಆರ್‌ಐ ಸ್ಕ್ಯಾನರ್ ಮತ್ತು 6 ಎಂಇವಿ ಲೀನಿಯರ್ ಅಸ್ಸೆಲರೇಟರ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿದೆ.
ಮಹಾದೇವ ಆ್ಯಪ್ ಹಗರಣ: ಬಘೇಲ್‌ಗೆ ಸಿಬಿಐ ಬಿಸಿ
ನವದೆಹಲಿ: 2 ವರ್ಷದ ಹಿಂದೆ ದೇಶದಲ್ಲಿ ಸುದ್ದಿ ಮಾಡಿದ್ದ 6,000 ಕೋಟಿ ರು ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.ಬಘೇಲ್‌ರ ರಾಯ್ಪುರ ಮತ್ತು ಭಿಲಾಯಿ ನಿವಾಸಗಳಲ್ಲಿ ಸಿಬಿಐ ತಂಡಗಳು ಶೋಧ ನಡೆಸಿವೆ. ಇದರಲ್ಲಿ ರಾಜ್ಯದ ಉನ್ನತ ರಾಜಕಾರಣಿಗಳು ಮತ್ತು ಅಧಿಕಾರಿಗಳು ತೊಡಗಿರುವುದಾಗಿ ಇಡಿ ಆರೋಪಿಸಿದ್ದು, ಅವರ ಕೆಲ ಆಪ್ತರು ಹಾಗೂ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ನಿವಾಸಗಳಲ್ಲೂ ಹುಡುಕಾಟ ನಡೆಸಲಾಗಿದೆ. ಈ ಶೋಧವನ್ನು ‘ರಾಜಕೀಯ ಪ್ರೇರಿತ’ ಎಂದು ಕರೆದಿರುವ ಬಘೇಲ್, ‘ಐಸಿಸಿ ಸಭೆಯೊಂದರಲ್ಲಿ ಭಾಗವಹಿಸಲು ನಾನು ದೆಹಲಿಗೆ ಹೊರಟಿದ್ದಾಗಲೇ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.ಇದಕ್ಕೂ ಮುನ್ನ ಮದ್ಯ ಹಗರಣದ ಸಂಬಂಧ ಬಘೇಲ್ ಹಾಗೂ ಅವರ ಪುತ್ರನ ನಿವಾಸದಲ್ಲಿ ಇಡಿ ಶೋಧ ನಡೆಸಿತ್ತು.
ಏನಿದು ಹಗರಣ?:
ಮಹಾದೇವ್ ಆ್ಯಪ್ ಮೂಲಕ ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳಿಗೆ ಹೊಸ ಬಳಕೆದಾರರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಬೇನಾಮಿ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಲಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ 6,000 ಕೋಟಿ ರು. ನಷ್ಟವಾಗಿತ್ತು.
ನ್ಯಾ। ವರ್ಮಾ ಮನೆಯಲ್ಲಿ ಪೊಲೀಸರ ಶೋಧ; ಹಣ ಸಿಕ್ಕ ಸ್ಥಳಸೀಲ್
ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್ ವರ್ಮಾ ನಿವಾಸದಲ್ಲಿ ಕಂತೆ ಕಂತೆ ನೋಟು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಪೊಲೀಸ್ ಆಯುಕ್ತರ ನೇತೃತ್ವದ ತಂಡಮ ಜಡ್ಜ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೇ ವೇಳೆ ನ್ಯಾ। ವರ್ಮಾ ಮನೆಯಲ್ಲಿ ಹಣ ಸಿಕ್ಕ ಪ್ರದೇಶವನ್ನು ಸೀಲ್ ಮಾಡಿದ್ದಾರೆ.ಸುಮಾರು 2 ಗಂಟೆಗಳ ಕಾಲ ನ್ಯಾ। ವರ್ಮಾ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾ। ವರ್ಮಾ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಸ್ಥಳವನ್ನು ಕೂಡ ಪೊಲೀಸರು ಪರಿಶೀಲನೆ ನಡೆಸಿದ್ದು, ನ್ಯಾಯಾಧೀಶರ ಮನೆಯಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯನ್ನು ಕೂಡ ಪ್ರಶ್ನಿಸಿದ್ದಾರೆ.
ಕ್ಯಾನ್ಸರ್, ಮಧುಮೇಹ ಔಷಧ ಶೀಘ್ರ ಶೇ.1.7ರಷ್ಟು ದುಬಾರಿ
ನವದೆಹಲಿ: ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳ ಔಷಧಿಗಳು ಶೀಘ್ರದಲ್ಲೇ ಶೇ.1.7ರಷ್ಟು ದುಬಾರಿಯಾಗಲಿವೆ ಎಂದು ಸರ್ಕಾರಿ ಮೂಲಗಳು ಹೇಳಿವೆ.ಈ ಔಷಧಿಗಳ ನಿರೀಕ್ಷಿತ ಹೆಚ್ಚಳದ ಬಗ್ಗೆ ಮಾತನಾಡಿದ ಅಖಿಲ ಭಾರತ ರಸಾಯನಶಾಸ್ತ್ರಜ್ಞರು ಮತ್ತು ಔಷಧಶಾಸ್ತ್ರಜ್ಞರ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್, ಕಚ್ಚಾ ವಸ್ತುಗಳ ಬೆಲೆ ಮತ್ತು ಇತರ ವೆಚ್ಚಗಳು ಹೆಚ್ಚುತ್ತಿರುವ ಕಾರಣ ಈ ಕ್ರಮವು ಔಷಧ ಉದ್ಯಮಕ್ಕೆ ಪರಿಹಾರವನ್ನು ನೀಡುತ್ತದೆ ಎಂದು ತಿಳಿಸಿದರು.ಆದರೆ ದರ ಏರಲು 90 ದಿನ ಹಿಡಿಯುತ್ತದೆ. ಏಕೆಂದರೆ ಹಳೇ ದಾಸ್ತಾನು ಖಾಲಿ ಆಗಲು ಇನ್ನೂ 3 ತಿಂಗಳು ಬೇಕು ಎಂದು ಅವರು ಸ್ಪಷ್ಟಪಡಿಸಿದರು.