ಸಾರಾಂಶ
ಕಳೆದ ತಿಂಗಳ ಡಿ.21ರಂದು ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ್ದ ಉದ್ಯಮಿ ಚಂದ್ರಮ್ ಅವರ ಕಾರು ಅಪಘಾತ ಮಾಸುವ ಮುನ್ನವೇ ಸೋಮವಾರ ಬೆಳಗ್ಗೆ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ದಾಬಸ್‍ಪೇಟೆ : ಕಳೆದ ತಿಂಗಳ ಡಿ.21ರಂದು ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ್ದ ಉದ್ಯಮಿ ಚಂದ್ರಮ್ ಅವರ ಕಾರು ಅಪಘಾತ ಮಾಸುವ ಮುನ್ನವೇ ಸೋಮವಾರ ಬೆಳಗ್ಗೆ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಸೋಂಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು- ಬೆಂಗಳೂರು ರಸ್ತೆಯ ಗುಂಡೇನಹಳ್ಳಿ ಬಳಿಯ ಕಾಮಧೇನು ಹೋಟೆಲ್ ಮುಂಭಾಗ ಸರಣಿ ಅಪಘಾತ ಸಂಭವಿಸಿದೆ.
ತುಮಕೂರು ಮೂಲದ ಸತೀಶ್ (32) ಗಾಯಗೊಂಡ ಕಾರು ಚಾಲಕನಾಗಿದ್ದು, ಈತ ತುಮಕೂರು ಜಿಲ್ಲೆಯ ಸೇಲ್ಸ್ ಟ್ಯಾಕ್ಸ್ ಕಚೇರಿಗೆ ಸೇರಿದ ಕಾರನ್ನು ಓಡಿಸುತ್ತಿದ್ದನು, ತುಮಕೂರಿನಿಂದ ಬೆಂಗಳೂರಿಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.
ಘಟನಾ ವಿವರ:
ಜ.20 ರಂದು ಬೆಳಗ್ಗೆ 8.20ರ ಸಮಯದಲ್ಲಿ ಕಾಮಧೇನು ಹೋಟೆಲ್ ಬಳಿ ಲಾರಿಯೊಂದು ಯೂ ಟರ್ನ್ ತೆಗೆದುಕೊಳ್ಳುತ್ತಿತ್ತು. ಈ ವೇಳೆ ತುಮಕೂರು ರಸ್ತೆಯಲ್ಲಿ ಬರುತ್ತಿದ್ದ ಇನ್ನೊಂದು ಲಾರಿಯ ಚಾಲಕ ಬ್ರೇಕ್ ಹಾಕಿದ್ದಾನೆ. ಈ ಲಾರಿಯ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಚಾಲಕನೂ ಸಹ ಬ್ರೇಕ್ ಹಾಕಿ ನಿಧಾನವಾಗಿ ಚಲಾಯಿಸಿದ್ದರೂ, ಕಾರಿನ ಹಿಂಬದಿ ಯಮಧೂತನಂತೆ ವೇಗವಾಗಿ ಬಂದ ಟೂರಿಸ್ಟ್ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ:
ಹಿಂಬದಿ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಲಾರಿಯ ಕೆಳಗೆ ನುಗ್ಗಿದ್ದು ನುಜ್ಜುಗುಜ್ಜಾಗಿದೆ. ಕಾರಿನ ಏರ್ ಬ್ಯಾಗ್ ತಕ್ಷಣ ತೆರೆದ ಹಿನ್ನೆಲೆಯಲ್ಲಿ ಕಾರು ಚಾಲಕ ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕಾರಿಗೆ ಡಿಕ್ಕಿ ಹೊಡೆದ ಬಸ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಪಘಾತವಾಗುತ್ತಿದ್ದಂತೆ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ನಿಲ್ಲಿಸಿ ಪರಾರಿಯಾಗಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಪೊಲೀಸರು ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು, ಕ್ರೇನ್ ಗಳ ಮೂಲಕ ನುಜ್ಜುಗುಜ್ಜಾಗಿದ್ದ ಕಾರನ್ನು ಹೊರತರಲಾಯಿತು.