ಸಾರಾಂಶ
ಅಮೃತಸರ : ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ‘ಧರ್ಮದ್ರೋಹಿ’ ಎಂದು ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯಮಂಡಳಿ ‘ಅಕಾಲ್ ತಖ್ತ್’ ತೀರ್ಪು ನೀಡಿದೆ.
2007ರಿಂದ 2017ರ ಅವಧಿಯಲ್ಲಿ ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದಾಗ ಎಸಗಿದ ಧಾರ್ಮಿಕ ತಪ್ಪುಗಳಿಗಾಗಿ ಸುಖಬೀರ್‌ಗೆ ಈ ‘ಶಿಕ್ಷೆ’ ನೀಡಲಾಗಿದೆ. ಆದರೆ, ಅವರು ಮಾಡಿದ ತಪ್ಪುಗಳೇನು ಎಂಬುದನ್ನು ಮಂಡಳಿ ಹೇಳಿಲ್ಲ. 15 ದಿನಗಳಲ್ಲಿ ಅವರು ತಖ್ತ್ ಮುಂದೆ ಹಾಜರಾಗಿ ಕ್ಷಮೆ ಕೇಳಬೇಕು ಎಂದು ಆದೇಶಿಸಲಾಗಿದೆ.
ಅಕಾಲ್ ತಖ್ತ್‌ನ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿರುವ ಸುಖಬೀರ್, ಶೀಘ್ರವೇ ಅಲ್ಲಿಗೆ ಹಾಜರಾಗಿ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ದೂರು ಏನು?:
ಇತ್ತೀಚೆಗೆ ಶಿರೋಮಣಿ ಅಕಾಲಿದಳದಲ್ಲಿ ಕೆಲ ಮುಖಂಡರು ಸುಖಬೀರ್ ವಿರುದ್ಧ ಬಂಡಾಯವೆದ್ದು, ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ ಅವರು ಅಧಿಕಾರದಲ್ಲಿದ್ದಾಗ ಧರ್ಮದ್ರೋಹ ಎಸಗಿದ್ದಾರೆ ಎಂದು ಅಕಾಲ್ ತಖ್ತ್‌ಗೆ ದೂರು ನೀಡಿದ್ದರು. ಆ ದೂರಿನ ವಿಚಾರಣೆ ನಡೆಸಿದ ಅಕಾಲ್ ತಖ್ತ್‌ನ ಐವರು ಧರ್ಮಗುರುಗಳು ‘ಸುಖಬೀರ್ ಧರ್ಮದ್ರೋಹಿ. ಅವರು 15 ದಿನದಲ್ಲಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ಧರ್ಮದ್ರೋಹಿ ಪಟ್ಟ ಇರುತ್ತದೆ’ ಎಂದು ತೀರ್ಪು ನೀಡಿದ್ದಾರೆ.
ಸುಖಬೀರ್ ಉಪಮುಖ್ಯಮಂತ್ರಿ ಆಗಿದ್ದಾಗ ಫರೀದ್‌ಕೋಟ್‌ನಲ್ಲಿ ಮೂಲ ಗುರುಗ್ರಂಥ ಸಾಹಿಬ್‌ನ ಕೆಲ ಪುಟಗಳನ್ನು ಕಳವು ಮಾಡಿ, ಅವುಗಳ ಜಾಗದಲ್ಲಿ ಅಶ್ಲೀಲ ಬರಹಗಳನ್ನು ಇರಿಸಲಾಗಿತ್ತು. ಬಳಿಕ ಹಿಂಸಾಚಾರ ನಡೆದಿತ್ತು. ಅದಕ್ಕೆ ಸಂಬಂಧಪಟ್ಟಂತೆ ಈ ‘ತೀರ್ಪು’ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.