ಸಂಕ್ರಾಂತಿವರೆಗೆ ಅಯೋಧ್ಯೆ ಅಕ್ಷತೆ ಹಂಚಿಕೆ

| Published : Jan 04 2024, 01:45 AM IST / Updated: Jan 05 2024, 12:49 PM IST

ಸಾರಾಂಶ

ಅಕ್ಷತೆ ಪ್ಯಾಕೆಟ್‌, ರಾಮ ಮಂದಿರದ ಭಾವಚಿತ್ರ ಹಾಗೂ ದೇವಾಲಯ ನಿರ್ಮಾಣದ ವಿವರಗಳುಳ್ಳ ಭಿತ್ತಿಪತ್ರವನ್ನು ಸಂಕ್ರಾಂತಿವರೆಗೆ ಜನರಿಗೆ ನೀಡಲಾಗುತ್ತದೆ.

ಅಯೋಧ್ಯೆ: ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಹಮ್ಮಿಕೊಳ್ಳಲಾದ ಪವಿತ್ರ ಮಂತ್ರಾಕ್ಷತೆಯ ವಿತರಣೆಯು ಜ.15ರವರೆಗೆ ಮುಂದುವರಿಯಲಿದೆ.

ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಜನವರಿ 22ರಂದು 12.20ಕ್ಕೆ ನೆರವೇರಲಿದ್ದು, ದೇಶಾದ್ಯಂತ ಈ ದಿನವನ್ನು ಹಬ್ಬದಂತೆ ಆಚರಿಸಲು ಕರೆ ನೀಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ತಿಳಿಸಿದ್ದಾರೆ.ಅಕ್ಷತೆಯುಳ್ಳ ಪ್ಯಾಕೆಟ್‌, ರಾಮ ಮಂದಿರದ ಭಾವಚಿತ್ರ ಹಾಗೂ ದೇವಾಲಯ ನಿರ್ಮಾಣದ ವಿವರಗಳುಳ್ಳ ಭಿತ್ತಿಪತ್ರವನ್ನು ಜನರಿಗೆ ನೀಡಲಾಗುತ್ತಿದೆ.ಈ ಅಭಿಯಾನದ ಮೂಲಕ ಸುಮಾರು 5 ಲಕ್ಷ ಕುಟುಂಬಗಳು ರಾಮ ಮಂದಿರದ ಭಾವಚಿತ್ರ ಹಾಗೂ ನಿರ್ಮಾಣದ ವಿವರಗಳನ್ನು ಪಡೆಯಲಿವೆ ಎಂದು ಮಂದಿರದ ಟ್ರಸ್ಟ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ವಿವರಗಳು ಹೊರ ಬಂದಾಗ 5 ಲಕ್ಷ ಜನರನ್ನು ನಾವು ತಲುಪಿರಲಿದ್ದೇವೆ ಎಂದು ತಿಳಿಸಿದ್ದಾರೆ.ಜನವರಿ 22ರಂದು ರಾಮನ ಪ್ರಾಣಪ್ರತಿಷ್ಠೆಯನ್ನು ದೀಪಾವಳಿಯಂತೆ ಆಚರಿಸಲು ಜನರು ತಮ್ಮ ಮನೆಗಳಲ್ಲಿ ವಿಶೇಷ ದೀಪಗಳನ್ನು ಬೆಳಗಿಸುವಂತೆ ಕೆಲವು ದಿನಗಳ ಹಿಂದೆ ಪ್ರಧಾನಿ ಮೊದಿ ಅವರು ಮನವಿ ಮಾಡಿದ್ದರು.ಅಕ್ಷತೆಯ ವಿತರಣೆ ನಡೆಯುವ ವೇಳೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ಹಬ್ಬದಂತೆ ಆಚರಿಸಲು ಹತ್ತಿರದ ದೇವಾಲಯಗಳಲ್ಲಿ ಸೇರುವಂತೆ ರೈ ಮನವಿ ಮಾಡಿದರು.ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ಸಂಘಟನೆಗಳು ಹಾಗೂ ಸೋದರ ಸಂಘಟನೆಗಳ ಕಾರ್ಯಕರ್ತರಿಂದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಲಿದೆ. 

ದೇವಸ್ಥಾನ ನಿರ್ಮಿಸುವುದು ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಕೆಲಸ ಮಾಡುವುದು ಟ್ರಸ್ಟ್‌ನ ಕೆಲಸವಾಗಿದೆ ಎಂದು ಮೂಲಗಳು ತಿಳಿಸಿವೆ.ಜನವರಿ 15ರ ಮಕರ ಸಂಕ್ರಾಂತಿವರೆಗೆ ಅಕ್ಷತಾ ವಿತರಣೆ ನಡೆಯಲಿದೆ. ಅಕ್ಷತೆ ವಿತರಣೆಗೆ ಪಟ್ಟಣ ಹಾಗೂ ಹಳ್ಳಿಗಳ ಮನೆಗಳಿಗೆ ಭೇಟಿ ನೀಡುವ ಕಾರ್ಯಕರ್ತರು ಜೈಶ್ರೀರಾಮ್‌ ಹಾಗೂ ಸಿಯಾರಾಮ್‌ ಘೋಷಣೆಗಳನ್ನು ಮೊಳಗಿಸುವಂತೆ ತಿಳಿಸಲಾಗಿದೆ.

ಅಯೋಧ್ಯೆಯ ವಾಲ್ಮಿಕಿ ಕಾಲೋನಿಯಿಂದ ಅಕ್ಷತೆ ವಿತರಣೆಯು ಆರಂಭವಾಗಿದೆ. ಇದನ್ನು ಈಗ ನಗರದ ವಿವಿಧ ಕಾಲೋನಿಗಳಿಗೆ ಕೊಂಡೊಯ್ಯಲಾಗುವುದು ಎಂದು ಆರ್‌ಎಸ್‌ಎಸ್‌ ಪ್ರಮುಖರು ತಿಳಿಸಿದ್ದಾರೆ.ಅಯೋಧ್ಯೆಯಲ್ಲಿ ನಡೆಯುವ ಸಮಾರಂಭಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ. ಇದರಲ್ಲಿ ಭಾರತ ಮತ್ತು ವಿದೇಶಗಳಿಂದ 7,000 ಅತಿಥಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. 

12.20ಕ್ಕೆ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಈ ಕಾರ್ಯಕ್ರಮದ ನಂತರ ಅಕ್ಕಪಕ್ಕರ ಕಾಲೋನಿಗಲ್ಲಿ ಜನ ಆರತಿ ನೆರವೇರಿಸಿ, ಪ್ರಸಾದ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗಾಗಿ ದೊಡ್ಡ ಟಿ.ವಿ ಪರದೆ ಹಾಕಬೇಕು ಎಂದು ರೈ ತಿಳಿಸಿದ್ದಾರೆ. ಸೂರ್ಯಾಸ್ತದ ನಂತರ ಪ್ರಧಾನಿಯವರ ಕರೆಯಂತೆ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ ಎಂದು ರೈ ಈ ಹಿಂದೆ ತಿಳಿಸಿದ್ದರು. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು, ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.