ತಿರುಪತಿಯ ಎಲ್ಲಾ ಸಿಬ್ಬಂದಿ ಹಿಂದೂ ಆಗಿರಬೇಕು : ಟಿಟಿಡಿಯ ನೂತನ ಅಧ್ಯಕ್ಷ ಬಿ.ಆರ್‌.ನಾಯ್ಡು

| Published : Nov 01 2024, 12:02 AM IST / Updated: Nov 01 2024, 06:37 AM IST

ತಿರುಪತಿಯ ಎಲ್ಲಾ ಸಿಬ್ಬಂದಿ ಹಿಂದೂ ಆಗಿರಬೇಕು : ಟಿಟಿಡಿಯ ನೂತನ ಅಧ್ಯಕ್ಷ ಬಿ.ಆರ್‌.ನಾಯ್ಡು
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ತಿರುಮಲ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಹಿಂದೂಗಳೇ ಆಗಿರಬೇಕು ಎಂದು ಟಿಟಿಡಿಯ ನೂತನ ಅಧ್ಯಕ್ಷ ಬಿ.ಆರ್‌.ನಾಯ್ಡು ಸೂಚಿಸಿದ್ದಾರೆ.

ಹೈದರಾಬಾದ್‌: ತಿರುಪತಿ ತಿರುಮಲ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಹಿಂದೂಗಳೇ ಆಗಿರಬೇಕು ಎಂದು ಟಿಟಿಡಿಯ ನೂತನ ಅಧ್ಯಕ್ಷ ಬಿ.ಆರ್‌.ನಾಯ್ಡು ಸೂಚಿಸಿದ್ದಾರೆ.

ಈ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ಅವಧಿಯಲ್ಲಿ ತಿರುಪತಿಗೆ ಹಲವು ಹಿಂದೂಯೇತರರ ನೇಮಕ ಮಾಡಿದ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಜಗನ್‌ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ದನ ಮತ್ತು ಹಂದಿಯ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬ ವಿಷಯ ಕೂಡಾ ಭಾರೀ ಗದ್ದಲ ಸೃಷ್ಟಿಸಿತ್ತು.

ಈ ಹಿನ್ನೆಲೆಯಲ್ಲಿ ನೂತನ ಟಿಡಿಪಿ ಸರ್ಕಾರ ಟಿಟಿಡಿಗೆ ಬಿ.ಆರ್‌.ನಾಯ್ಡು ಅಧ್ಯಕ್ಷತೆಯ 24 ಸದಸ್ಯರನ್ನು ಗುರುವಾರ ನೇಮಕ ಮಾಡಿತ್ತು. ಅದರ ಬೆನ್ನಲ್ಲೇ ಮಾತನಾಡಿದ ನಾಯ್ಡು, ‘ತಿರುಪತಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳು ಹಿಂದೂಗಳಾಗಿರಬೇಕು. ಹಿಂದೂ ಸಿಬ್ಬಂದಿ ನೇಮಕ ನನ್ನ ಮೊದಲ ಪ್ರಯತ್ನ. ಇದರಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಪರಿಶೀಲಿಸುತ್ತೇವೆ’ ಎಂದರು. ಅಲ್ಲದೇ ‘ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಜೊತೆಗೆ ಮಾತುಕತೆಯನ್ನು ನಡೆಸುತ್ತೇವೆ. ಈಗಾಗಲೇ ಕೆಲಸದಲ್ಲಿರುವ ಅನ್ಯಧರ್ಮಿಯ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ಕಳುಹಿಸಬೇಕೇ, ಅಥವಾ ಸ್ವಯಂ ನಿವೃತ್ತಿ ನೀಡಬೇಕೆಂಬ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು.