ಬಂಗಾಳ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

| Published : May 03 2024, 01:03 AM IST / Updated: May 03 2024, 05:52 AM IST

gang rape

ಸಾರಾಂಶ

ಆಘಾತಕಾರಿ ವಿದ್ಯಮಾನವೊಂದರಲ್ಲಿ ಪ.ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

ಕೋಲ್ಕತಾ: ಆಘಾತಕಾರಿ ವಿದ್ಯಮಾನವೊಂದರಲ್ಲಿ ಪ.ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ರಾಜಭವನದ ಗುತ್ತಿಗೆ ಮಹಿಳಾ ಸಿಬ್ಬಂದಿ ಈ ಬಗ್ಗೆ ಕೋಲ್ಕತಾದ ಸ್ಟ್ರೀಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ,

ದೂರುದಾರ ಮಹಿಳೆ 2019 ರಿಂದ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ರಾಜಭವನದ ಅಧಿಕಾರಿಯೊಬ್ಬರ ಮುಂದೆ ಅಳಲು ತೋಡಿಕೊಂಡು ನಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾ ಭೇಟಿ ವೇಳೆ ರಾಜಭವನದಲ್ಲಿ ತಂಗಲಿದ್ದು, ಅದಕ್ಕಿಂತ 1 ದಿನ ಮುಂಚೆ ಈ ಘಟನೆ ನಡೆದಿದೆ.

ದೂರಿನಲ್ಲಿ ಏನಿದೆ?:

ಬಂಗಾಳದಲ್ಲಿ ಇತ್ತೀಚೆಗೆ ಗಲಭೆಗಳು ನಡೆದ ಕಾರಣ ದೂರು ಸ್ವೀಕಾರಕ್ಕೆ ‘ಶಾಂತಿ ಕೊಠಡಿ’ಯನ್ನು ರಾಜ್ಯಪಾಲರು ರಾಜಭವನದಲ್ಲಿ ತೆರೆದಿದ್ದಾರೆ. ಮಹಿಳೆಯು ಅಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕಳೆದ 19ರಂದು ರಾಜ್ಯಪಾಲರು ಶಾಂತಿ ಕೊಠಡಿಗೆ ಭೇಟಿ ನೀಡಿದಾಗ ನನ್ನ ಜತೆ ಮಾತುಕತೆ ನಡೆಸಿದ್ದರು. ಅಂದಿನಿಂದ, ರಾಜ್ಯಪಾಲರು ಅವರನ್ನು ವಿಭಿನ್ನವಾಗಿ ನಡೆಸಿಕೊಂಡರು. ಕೆಟ್ಟ ಚಿಹ್ನೆಗಳು ತೋರಿಸಿದರು. ನಂತರ ರಾಜ್ಯಪಾಲರು ತಮ್ಮ ಕೊಠಡಿಗೆ ಕರೆಸಿಕೊಂಡರು. ಚೇಂಬರ್‌ಗೆ ಹೋದ ನಂತರ ರಾಜ್ಯಪಾಲರು ಕಿರುಕುಳ ನೀಡಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

‘ರಾಜ್ಯಪಾಲರು ತನ್ನನ್ನು ಆಕ್ರಮಣಕಾರಿಯಾಗಿ ಮುಟ್ಟಿದ್ದಾರೆ. ನನ್ನ ಮೇಲೆ ಕೈ ಹಾಕಿ ನನ್ನನ್ನು ‘ಸುಂದರಿ’ ಎಂದು ಕರೆಯುತ್ತಾರೆ. ವಿಶ್ವವಿದ್ಯಾಲಯದ ಉದ್ಯೋಗದ ಹೆಸರಿನಲ್ಲಿ ನನಗೆ ಕಿರುಕುಳ ನೀಡಿದ್ದಾರೆ’ ಎಂದು ಆಕೆ ದೂರಿದ್ದಾರೆ.