ಸಾರಾಂಶ
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕುರಿತಾದ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡ ಮೇಲೆ ಗುಜರಾತ್ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ.
ಅಹ್ಮದಾಬಾದ್: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕುರಿತಾದ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡ ಮೇಲೆ ಗುಜರಾತ್ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಸೋಮವಾರ ಅಸ್ಸಾಂನಲ್ಲಿ ಓರ್ವ ಕಾಂಗ್ರೆಸ್ ನಾಯಕನ ಬಂಧಿಸಲಾಗಿತ್ತು.
ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಆಪ್ತ ಸತೀಶ್ ವನ್ಸೋಲಾ ಹಾಗೂ ದಾಹೋದ್ ಜಿಲ್ಲೆ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಕೇಶ್ ಬರಿಯಾ ಬಂಧಿತರು. ಇವರಿಬ್ಬರೂ ಸಹ ತಮಗೆ ವಾಟ್ಸಾಪ್ ಮೂಲಕ ಬಂದಿದ್ದ ಅಮಿತ್ ಶಾರ ತಿರುಚಿದ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇಬ್ಬರ ಮೇಲೂ ಸಹ ಕೋಮು ಪ್ರಚೋದನೆಗೆ ಪ್ರೋತ್ಸಾಹ ನೀಡಿದ ಕಲಂನಡಿ ಪ್ರಕರಣ ದಾಖಲಿಸಲಾಗಿದೆ.ಇದರ ಜೊತೆಗೆ ಮುಂಬೈ ಯುವ ಕಾಂಗ್ರೆಸ್ ಘಟಕದ 16 ಮಂದಿಯ ಮೇಲೂ ಸಹ ಈ ವಿಡಿಯೋವನ್ನು ಪ್ರಸರಣ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣದಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಅಮಿತ್ ಶಾ ಅವರು ಸಮಾವೇಶವೊಂದರಲ್ಲಿ ಹೇಳಿದ್ದರು. ಆದರೆ ಅದನ್ನು ತಿರುಚಿ, ಎಲ್ಲ ಮೀಸಲಾತಿಯನ್ನೂ ರದ್ದುಗೊಳಿಸಲಾಗುವುದು ಎಂಬರ್ಥ ಬರುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.