ಸಾರಾಂಶ
ಜಿಮೇಲ್, ಮೈಕ್ರೋಸಾಫ್ಟ್ ಪ್ರತಿಸ್ಪರ್ಧಿ ಜೋಹೋಪಿಟಿಐ ನವದೆಹಲಿ
ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರತೆ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಇ-ಮೇಲ್ ವಿಳಾಸವನ್ನು ಸ್ವದೇಶಿ ಸೇವೆಯಾದ ಜೊಹೊ ಮೇಲ್‌ಗೆ ಬದಲಾಯಿಸಿರುವುದಾಗಿ ಬುಧವಾರ ಘೋಷಿಸಿದ್ದಾರೆ.ಜೋಹೋ ಮೇಲ್, ಮಾರುಕಟ್ಟೆಯಲ್ಲಿ ಗೂಗಲ್‌ನ ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ‘ನಾನು ಜೊಹೊ ಮೇಲ್‌ಗೆ ವಿಳಾಸ ಬದಲಾಯಿಸಿದ್ದೇನೆ. amitshah.bjp@zohomail.in ಇದು ನನ್ನ ಹೊಸ ಇ-ಮೇಲ್ ವಿಳಾಸ. ಮೇಲ್ ಮೂಲಕ ಭವಿಷ್ಯದ ಪತ್ರವ್ಯವಹಾರಕ್ಕಾಗಿ, ದಯವಿಟ್ಟು ಈ ವಿಳಾಸವನ್ನು ಬಳಸಿ’ ಎಂದು ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರು ಹಾಗೂ ಸರ್ಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಇದೇ ಹಾದಿ ಹಿಡಿವ ಸಾಧ್ಯತೆ ಇದೆ.==
ಉಕ್ರೇನ್‌ಗೆ ರಷ್ಯಾ ಸೇನೆಯ ಭಾರತೀಯ ಯೋಧ ಶರಣುಗುಜರಾತ್ನ ಮಜೋತಿ ಸಾಹಿಲ್ ಮೊಹಮ್ಮದ್ ಶರಣಾಗತಿ
ಜೈಲುಶಿಕ್ಷೆಗೆ ಗುರಿಯಾಗಿದ್ದಾತನಿಗೆ ಸೇನೆ ಆಫರ್ ನೀಡಿದ್ದ ರಷ್ಯಾ
ಸೇನಾ ಕಾರ್ಯಾಚರಣೆ ಇಷ್ಟವಿಲ್ಲದೆ ಉಕ್ರೇನ್ ಸೇನೆಗೆ ಮೊರೆ
ಪಿಟಿಐ ನವದೆಹಲಿರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯನೊಬ್ಬ ಉಕ್ರೇನಿಯನ್ ಪಡೆಗಳಿಗೆ ಶರಣಾಗತನಾಗಿದ್ದಾನೆ ಎಂದು ಉಕ್ರೇನ್ ಸೈನ್ಯ ಮಂಗಳವಾರ ತಿಳಿಸಿದೆ.
ಗುಜರಾತ್ ಮೂಲದ ಮಜೋತಿ ಸಾಹಿಲ್ ಮೊಹಮ್ಮದ್ (22) ಎಂಬ ಸೈನಿಕ ತಮಗೆ ಶರಣಾಗಿರುವ ವಿಡಿಯೋವನ್ನು ಉಕ್ರೇನ್ ಸೇನೆ ಟೆಲಿಗ್ರಾಂನಲ್ಲಿ ಹಂಚಿಕೊಂಡಿದೆ. ಈತ ರಷ್ಯಾ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿಸಿದೆ.
ವಿಡಿಯೋದಲ್ಲೇನಿದೆ?:ಉಕ್ರೇನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಜೋತಿ ಸಾಹಿಲ್ ರಷ್ಯಾದಲ್ಲಿ ನಡೆದ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾನೆ. ‘ಡ್ರಗ್ ಸಂಬಂಧಿ ಪ್ರಕರಣದಲ್ಲಿ ರಷ್ಯಾ ನನಗೆ 7 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಹೆಚ್ಚಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕಾದರೆ ರಷ್ಯಾ ಸೇನೆಯನ್ನು ಸೇರುವ ಅವಕಾಶ ನೀಡಿತು. ನನಗೆ ಜೈಲಿನಲ್ಲಿರುವುದು ಇಷ್ಟವಿರಲಿಲ್ಲ. ಹಾಗಾಗಿ ವಿಶೇಷ ಸೈನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಅದರಿಂದಲೂ ನನಗೆ ಹೊರಬೇಕಾಗಿತ್ತು. 16 ದಿನಗಳ ತರಬೇತಿಯ ನಂತರ ಅ.1ರಂದು 3 ದಿನಗಳ ಕಾರ್ಯಾಚರಣೆಗೆ ನನ್ನನ್ನು ಕಳಿಸಲಾಯಿತು. ಅಲ್ಲಿ ನನ್ನ ಕಮಾಂಡರ್ ಜೊತೆ ಸಂಘರ್ಷವಾಯಿತು. ಸುಮಾರು 2-3 ಕಿ.ಮೀ. ದೂರದಲ್ಲಿ ಯುಕ್ರೇನಿಯನ್ ಬಂಕರ್ ಕಂಡೆ. ತಕ್ಷಣ ನನ್ನ ರೈಫಲ್ ಕೆಳಗಿಳಿಸಿ, ನನಗೆ ಯುದ್ಧ ಮಾಡಲು ಇಷ್ಟವಿಲ್ಲ, ಸಹಾಯ ಮಾಡಿ. ಮರಳಿ ರಷ್ಯಾಕ್ಕೆ ಹೋಗಲಾರೆ ಎಂದೆ’ ಎಂದು ಹೇಳಿದ್ದಾನೆ.
ಭಾರತ ಮೌನ:ಆದರೆ ಈ ಬಗ್ಗೆ ಭಾರತೀಯ ಅಧಿಕಾರಿಗಳು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವರದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ 27 ಭಾರತೀಯರನ್ನು ತಕ್ಷಣ ಬಿಡುಗಡೆ ಮಾಡಿ, ಸ್ವದೇಶಕ್ಕೆ ಮರಳಿಸಬೇಕು ಎಂದು ಕಳೆದ ತಿಂಗಳಷ್ಟೇ ಭಾರತದ ವಿದೇಶಾಂಗ ಸಚಿವಾಲಯ ರಷ್ಯಾಕ್ಕೆ ಆಗ್ರಹಿಸಿತ್ತು. ಹಿಂದಿನ ವರ್ಷ ರಷ್ಯಾಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಈ ವಿಚಾರದ ಕುರಿತು ಧ್ವನಿ ಎತ್ತಿದ್ದರು. ಭಾರತೀಯರನ್ನು ಸೇನೆಗೆ ಸೇರುವಂತೆ ರಷ್ಯಾ ಒತ್ತಡ ಹೇರುತ್ತಿದೆ ಎಂಬ ವರದಿಗಳು ಆಗಾಗ ಬರುತ್ತಲೇ ಇವೆ.==
ನಮ್ಮಲ್ಲಿ ಡಿಜಿಟಲ್ ಅರೆಸ್ಟ್ ಇಲ್ಲ, ನೇರ ಬಂಧನ ಮಾತ್ರ: ಇ.ಡಿ ಸ್ಪಷ್ಟನೆಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚುತ್ತಿರುವ ಕುರಿತು ಕಳವಳ
ನಕಲಿ ಸಂದೇಶ, ಕರೆಗಳಿಗೆ ಹಣ ಕೊಡದಂತೆ ಮನವಿ
ಪಿಟಿಐ ನವದೆಹಲಿಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್‌ಎ) ಅಡಿಯಲ್ಲಿ ಡಿಜಿಟಲ್ ಅರೆಸ್ಟ್ ಅಥವಾ ಆನ್ಲೈನ್ ಅರೆಸ್ಟ್ ಎಂಬುದು ಅಸ್ತಿತ್ವದಲ್ಲಿಲ್ಲ. ಜಾರಿ ನಿರ್ದೇಶನಾಲಯದಿಂದ (ಇ.ಡಿ) ಯಾವುದೇ ಬಂಧನವಾದರೂ, ಅದನ್ನು ನೇರವಾಗಿ ವ್ಯಕ್ತಿಯನ್ನು ಭೇಟಿಯಾಗಿ, ಕಾನೂನು ಪ್ರಕ್ರಿಯೆಯನ್ನು ಅನುಸರಿಸಿಯೇ ಮಾಡಲಾಗುತ್ತದೆ ಎಂದು ಇ.ಡಿ ಬುಧವಾರ ತಿಳಿಸಿದೆ.ವಂಚಕರು ಜನರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ, ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆ’ ಎಂದು ಹೆದರಿಸಿ ಹಣ ಪೀಕುವ ಪ್ರಕರಣಗಳು ಹೆಚ್ಚುತ್ತಿವೆ. ಇ.ಡಿ ಹೆಸರಿನಲ್ಲಿ ನಕಲಿ ಸಮನ್ಸ್ ಕಳಿಸಿ ಮೋಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಜನರಿಗೆ ಸ್ಪಷ್ಟನೆ ನೀಡಿರುವ ಇ.ಡಿ, ‘ನಾವು ಕಳಿಸುವ ಸಮನ್ಸ್‌ನಲ್ಲಿ ಕ್ಯೂಆರ್ ಕೋಡ್, ವಿಶೇಷ ಪಾಸ್‌ಕೋಡ್, ಅಧಿಕಾರಿಯ ಸಹಿ, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ ಇರುತ್ತದೆ. ಸಮನ್ಸ್ ನಿಜವಾದದ್ದೇ ಎಂದು ನಮ್ಮ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಬಹುದು. ಯಾವುದೇ ಸಂದೇಹವಿದ್ದರೆ ಸೈಬರ್ ಕ್ರೈಂ ಸಹಾಯವಾಣಿ 1930 ಅನ್ನು ಸಂಪರ್ಕಿಸಿ. ನಕಲಿ ಕರೆಗಳಿಗೆ ಹಣ ಕೊಡಬೇಡಿ’ ಎಂದು ವಿನಂತಿಸಿದೆ.
==ಭಾರತದ ಜತೆ ಯುದ್ಧ ಸಾಧ್ಯತೆ ಜೀವಂತ: ಪಾಕ್ ಸಚಿವ
ಈ ಬಾರಿ ಯುದ್ಧವಾದರೂ ನಾವೇ ಗೆಲ್ತೇವೆಔರಂಗಜೇಬ ಇದ್ದಾಗ ಮಾತ್ರ ಭಾರತ ಒಂದಾಗಿತ್ತು
ಪಾಕ್ ರಕ್ಷಣಾ ಸಚಿವ ಖ್ವಾಜಾ ಪ್ರಚೋದಕ ನುಡಿ
ಇಸ್ಲಾಮಾಬಾದ್: ಭಾರತದ ವಿರುದ್ಧ ಕಾಲುಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ, ಇದೀಗ ಭಾರತದ ಜೊತೆ ಮತ್ತೊಂದು ಯುದ್ಧ ಏರ್ಪಡುವ ಕುರಿತು ಸುಳಿವು ನೀಡಿದ್ದು, ‘ಯುದ್ಧದ ಸಾಧ್ಯತೆ ಜೀವಂತವಾಗಿದೆ. ಈ ಸಲವೂ ನಾವೇ ಗೆಲ್ತೇವೆ’ ಎಂದಿದೆ.ಸಮಾ ಟಿವಿಗೆ ಸಂದರ್ಶನ ನೀಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ‘ನನಗೆ ಸಂಘರ್ಷ ಮುಂದುವರಿಸುವುದು ಇಷ್ಟವಿಲ್ಲ, ಆದರೆ ಅಪಾಯಗಳಿರುವುದು ನಿಜ. ನಾನು ಅದನ್ನು ನಿರಾಕರಿಸುತ್ತಿಲ್ಲ. ಯುದ್ಧದ ವಿಷಯ ಬಂದರೆ, ದೇವರು ಇಚ್ಛಿಸಿದರೆ, ನಾವು ಮೊದಲಿಗಿಂತ ಉತ್ತಮ ಫಲಿತಾಂಶವನ್ನು ಸಾಧಿಸುತ್ತೇವೆ’ ಎಂದರು.
ಇದೇ ವೇಳೆ, ‘ಔರಂಗಜೇಬನ ಆಡಳಿತಾವಧಿ ಹೊರತುಪಡಿಸಿ, ಭಾರತ ಎಂದಿಗೂ ಏಕೀಕೃತ ರಾಷ್ಟ್ರವಾಗಿರಲಿಲ್ಲ. ಪಾಕಿಸ್ತಾನವನ್ನು ಅಲ್ಲಾನ ಹೆಸರಲ್ಲಿ ನಿರ್ಮಿಸಲಾಯಿತು. ಮನೆಯಲ್ಲಿ ನಾವು ಜಗಳವಾಡುತ್ತೇವೆ, ಸ್ಪರ್ಧಿಸುತ್ತೇವೆ. ಆದರೆ ಭಾರತದ ವಿರುದ್ಧ ಯುದ್ಧದ ವಿಚಾರ ಬಂದರೆ ನಾವು ಒಟ್ಟಾಗಿ ಬರುತ್ತೇವೆ’ ಎಂದರು.ಇತ್ತೀಚೆಗೆ ಭಾರತದ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ, ‘ಪಾಕಿಸ್ತಾನ ಉಗ್ರವಾದದ ಪೋಷಣೆಯನ್ನು ನಿಲ್ಲಿಸದಿದ್ದರೆ ಭಾರತೀಯ ಸೇನೆ ಈ ಬಾರಿ ಸಂಯಮ ತೋರುವುದಿಲ್ಲ’ ಎಂದು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಪಾಕ್ ಸಚಿವನಿಂದ ಈ ಹೇಳಿಕೆ ಬಂದಿದೆ.