ಸಾರಾಂಶ
ನವದೆಹಲಿ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರು. ಆದಾಯ ಗಳಿಸಿದ್ದು, ಅದರಲ್ಲಿ 120 ಕೋಟಿ ರು.ಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟಿದ್ದಾರೆ. ಈ ಮೂಲಕ, ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್ ನಂತರದ ಸ್ಥಾನದಲ್ಲಿ ಶಾರುಖ್ (92 ಕೋಟಿ ರು.), ವಿಜಯ್ (80 ಕೋಟಿ ರು.), ಸಲ್ಮಾನ್ ಖಾನ್ (75 ಕೋಟಿ ರು.) ಮೊದಲಾದವರು ಇದ್ದಾರೆ. ಬಚ್ಚನ್, ಚಲನಚಿತ್ರಗಳಿಂತ ಹೆಚ್ಚಿನ ಹಣವನ್ನು ಕೌನ್ ಬನೇಗಾ ಕರೋಡ್‌ಪತಿ ಮತ್ತು ಜಾಹೀರಾತು ಮೂಲಕ ಸಂಪಾದಿಸುತ್ತಿದ್ದಾರೆ.
==ಸೆನ್ಸೆಕ್ಸ್ 1131 ಅಂಕ ಏರಿ 75301 ಅಂಕದಲ್ಲಿ ಅಂತ್ಯ
ಮುಂಬೈ: ಹಲವು ದಿನಗಳಿಂದ ಕುಸಿತ ಕಾಣುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಧನಾತ್ಮಕ ಚೇತರಿಕೆ ಪರಿಣಾಮ ಭಾರೀ ಏರಿಕೆ ಕಂಡಿದೆ. ಸೆನ್ಸೆಕ್ಸ್ 1,311 ಅಂಕಗಳ ಭರ್ಜರಿ ಏರಿಕೆ ಕಂಡು 75301 ಅಂಕಗಳಲ್ಲಿ ಅಂತ್ಯವಾದರೆ ನಿಫ್ಟಿ 325 ಅಂಕ ಏರಿ 22834ರಲ್ಲಿ ಅಂತ್ಯವಾಗಿದೆ. ಕಳೆದ 2 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 1472 ಅಂಕ ಏರಿದ್ದು ಹೂಡಿಕೆದಾರರ ಸಂಪತ್ತಿನಲ್ಲಿ 8.67 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ. ಜಾಗತಿಕ ಬೆಳವಣಿಗೆ ಸಣ್ಣ ಮತ್ತು ಮಧ್ಯಮ ವಲಯ ಕಂಪನಿಗಳು ಉತ್ತಮ ಸಾಧನೆ ಮಾರುಕಟ್ಟೆಗೆ ಚೇತರಿಕೆ ನೀಡಿದೆ.
==ದಿಲ್ಲಿ: ಚಿನ್ನದ ಬೆಲೆ ಮತ್ತೆ ₹500 ಏರಿಕೆ, 10 ಗ್ರಾಂಗೆ ದಾಖಲೆ ₹91,000 ದರ
ನವದೆಹಲಿ: ಚಿನ್ನದ ಬೆಲೆಯ ಏರುಗತಿಯು ಮಂಗಳವಾರವೂ ಮುಂದುವರಿದಿದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ ಮತ್ತೆ 500 ರು. ಏರಿಕೆಯಾಗಿ ದಾಖಲೆಯ 91,250 ರು.ಕ್ಕೆ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನಿಶ್ಚಿತ ನಿರ್ಧಾರಗಳು, ಅಮೆರಿಕದ ಹಿಂಜರಿತ ಮತ್ತು ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಜನರು ಚಿನ್ನದ ಮೊರೆ ಹೋಗುತ್ತಿರುವ ಕಾರಣ ಬಂಗಾರ ತುಟ್ಟಿಯಾಗುತ್ತಿದೆ. ಜೊತೆಗೆ ದಾಸ್ತಾನುಗಾರರು ಮತ್ತು ಚಿಲ್ಲರೆ ಮಾರಾಟಗಾರರಿಂದ ಅಪಾರ ಬೇಡಿಕೆಯೂ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಗ್ರಾಂಗೆ 8,497 ರು.ಗೆ ಏರಿಕೆಯಾಗಿದೆ. ದೇಶದಲ್ಲಿ ಸೋಮವಾರವೂ ಸಹ ಚಿನ್ನದ ಬೆಲೆ ಬರೋಬ್ಬರಿ 1,300 ರು. ಏರಿಕೆಯಾಗಿತ್ತು.
==30ಕ್ಕೆ ಆರೆಸ್ಸೆಸ್ ಕಚೇರಿಗೆ ಮೋದಿ: ಭೇಟಿ ನೀಡುವ ಮೊದಲ ಪ್ರಧಾನಿ ಖ್ಯಾತಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ.30ರ ಯುಗಾದಿಯಂದು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರದಾನ ಕಚೇರಿಗೆ ಭೇಟಿ ನೀಡಿಲಿದ್ದಾರೆ. ಸಂಘದ ಕಚೇರಿಗೆ ಭೇಟಿ ನೀಡುವ ದೇಶದ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಲಿದ್ದಾರೆ. ತಮ್ಮ ಭೇಟಿ ವೇಳೆ ನಾಗಪುರದಲ್ಲಿ ಆರ್‌ಎಸ್‌ಎಸ್ ಬೆಂಬಲಿತ ಮಾಧವ ಕಣ್ಣಿನ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅಂದೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜೊತೆಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
==ಲಂಚ ಹಗರಣ; ನಿನ್ನೆ ರಾಬ್ಡಿ, ತೇಜ್, ಇಂದು ಲಾಲುಗೆ ಇ.ಡಿ. ಬಿಸಿ
ಪಟನಾ: ಉದ್ಯೋಗಕ್ಕಾಗಿ ಭೂಮಿ ಹಂಚಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ರ ಪತ್ನಿ ರಾಬ್ಡಿ ದೇವಿ, ಪುತ್ರ ತೇಜ್‌ಪ್ರತಾಪ್ ಯಾದವ್‌ರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಪ್ರಕರಣದಲ್ಲಿ ಲಾಲು ಪ್ರಸಾದ್ ಬುಧವಾರ ವಿಚಾರಣೆಗೆ ಒಳಪಡಲಿದ್ದಾರೆ. ಪ್ರಕರಣದಲ್ಲಿ ಈ ಹಿಂದೆಯೂ ಮೂವರನ್ನು ಇ.ಡಿ ವಿಚಾರಣೆ ನಡೆಸಿತ್ತು. ಲಾಲು ರೈಲ್ವೆ ಸಚಿವರಾಗಿದ್ದಾಗ, ಉದ್ಯೋಗ ನೀಡಲು ಭೂಮಿಯನ್ನು ಲಂಚವಾಗಿ ಪಡೆದ ಆರೋಪ ಎದುರಿಸುತ್ತಿದ್ದಾರೆ.