ಸೋನಿಯಾ ಎಂಪಿ ನಿಧಿಯ 70% ಅಲ್ಪಸಂಖ್ಯಾತರಿಗೆ ಹಂಚಿಕೆ: ಅಮಿತ್‌ ಶಾ ಕಿಡಿ

| Published : May 13 2024, 12:05 AM IST / Updated: May 13 2024, 04:43 AM IST

ಸೋನಿಯಾ ಎಂಪಿ ನಿಧಿಯ 70% ಅಲ್ಪಸಂಖ್ಯಾತರಿಗೆ ಹಂಚಿಕೆ: ಅಮಿತ್‌ ಶಾ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲು ಅಸ್ತ್ರದ ಬಳಿಕ ಕಾಂಗ್ರೆಸ್‌ ಮೇಲೆ ಬಿಜೆಪಿ ಮತ್ತೊಂದು ಆರೋಪ ಮಾಡಿದ್ದು, ಸೋನಿಯಾ ಗಾಂಧಿ ತಮ್ಮ ಸಂಸದರ ನಿಧಿಯಲ್ಲಿ ಶೇ.70ರಷ್ಟು ಹಣವನ್ನು ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿ ಕಾರಿದ್ದಾರೆ.

ರಾಯಬರೇಲಿ: ಮುಸ್ಲಿಂ ಮೀಸಲು ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದ ಬಿಜೆಪಿ, ಇದೀಗ ಸಂಸದರ ನಿಧಿ ಬಳಕೆಯಲ್ಲೂ ಕಾಂಗ್ರೆಸ್‌ ಓಲೈಕೆ ರಾಜಕಾರಣ ಮಾಡಿದೆ ಎಂಬ ಗಂಭೀರ ಆರೋಪ ಮಾಡಿದೆ. ಜೊತೆಗೆ ಇಂಥದ್ದೊಂದು ಗಂಭೀರ ಆರೋಪವನ್ನು ಅದು ರಾಯ್‌ಬರೇಲಿ ಮಾಜಿ ಸಂಸದೆ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧವೇ ಮಾಡಿದೆ.

ಭಾನುವಾರ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಮಾತನಾಡಿದ ಅಮಿತ್ ಶಾ, ‘ಶೆಹಜಾದಾ (ರಾಹುಲ್) ) ಮತ ಕೇಳಲು ಬಂದಿದ್ದಾರೆ. ಗಾಂಧೀ ಕುಟುಂಬಕ್ಕೆ ನೀವು ಹಲವು ವರ್ಷಗಳಿಂದ ಮತ ನೀಡುತ್ತಿದ್ದೀರಿ. ಸಂಸದರ ನಿಧಿಯಿಂದ ನಿಮಗೆ ಏನಾದರೂ ಸಿಕ್ಕಿದೆಯೇ..? ಏನೂ ಸಿಕ್ಕಿಲ್ಲ ಅಂದರೆ ಮತ್ತೆ ಎಲ್ಲಾ ಹಣ ಎಲ್ಲಿಗೆ ಹೋಯಿತು? ಅದು ಅವರ ಮತ ಬ್ಯಾಂಕ್‌ಗೆ ಹೋಗಿದೆ. 

ಸೋನಿಯಾ ಗಾಂಧಿ ಸಂಸದರ ನಿಧಿಯ ಶೇ. 70 ರಷ್ಟು ಹಣವನ್ನು ಅಲ್ಪಸಂಖ್ಯಾತರಿಗೆ ನೀಡಿದ್ದಾರೆ’ ಎಂದು ಆರೋಪಿಸಿದರು.ಇದೇ ವೇಳೆ ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ಬಗ್ಗೆ ತೀಕ್ಷ್ಣ ವಾಗ್ದಾಳಿ ಮುಂದುವರೆಸಿದ ಅಮಿತ್‌ ಶಾ, ‘ನಾವು ಮುಸ್ಲಿಂ ಮಹಿಳೆಯರ ಒಳಿತಿಗಾಗಿ ತ್ರಿವಳಿ ತಲಾಖ್‌ ರದ್ದುಪಡಿಸಿದರೆ, ಕಾಂಗ್ರೆಸ್‌ ಅದರ ಮರು ಜಾರಿಯ ಭರವಸೆ ನೀಡುತ್ತಿದೆ. ರಾಮಮಂದಿರಕ್ಕೆ ಆಹ್ವಾನ ನೀಡಿದರೂ ಅವರು ಬರಲಿಲ್ಲ. ಕಾರಣ ಅವರಿಗೆ ತಮ್ಮ ವೋಟ್‌ಬ್ಯಾಂಕ್‌ ಕಳೆದುಹೋಗುವ ಭೀತಿ ಇತ್ತು. ಕರ್ನಾಟಕ, ತೆಲಂಗಾಣದಲ್ಲಿ ಒಬಿಸಿ, ಎಸ್‌ಸಿ, ಎಸ್ಟಿ ಮೀಸಲು ಕಸಿದು ಮುಸ್ಲಿಮರಿಗೆ ನೀಡಿತು’ ಎಂದು ಆರೋಪಿಸಿದರು.