ರಾಮಮಂದಿರ ತೀರ್ಪು ಭಾರತದ ಜಾತ್ಯತೀತತೆ ಪ್ರತಿಬಿಂಬ: ಅಮಿತ್ ಶಾ

| Published : Feb 11 2024, 01:51 AM IST / Updated: Feb 11 2024, 08:14 AM IST

Amith Shah
ರಾಮಮಂದಿರ ತೀರ್ಪು ಭಾರತದ ಜಾತ್ಯತೀತತೆ ಪ್ರತಿಬಿಂಬ: ಅಮಿತ್ ಶಾ
Share this Article
  • FB
  • TW
  • Linkdin
  • Email

ಸಾರಾಂಶ

‘ರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜದ ಎಲ್ಲಾ ವರ್ಗದವರನ್ನು ಒಂದಾಗಿ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪು, ಭಾರತದ ಜಾತ್ಯತೀತ ಗುಣವನ್ನು ಜಗತ್ತಿಗೆ ತೋರಿಸಿದೆ’ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಪಾದಿಸಿದ್ದಾರೆ.

ಪಿಟಿಐ ನವದೆಹಲಿ

‘ರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜದ ಎಲ್ಲಾ ವರ್ಗದವರನ್ನು ಒಂದಾಗಿ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪು, ಭಾರತದ ಜಾತ್ಯತೀತ ಗುಣವನ್ನು ಜಗತ್ತಿಗೆ ತೋರಿಸಿದೆ’ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಪಾದಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಶನಿವಾರ ಲೋಕಸಭೆಯಲ್ಲಿ ಮಾತನಾಡಿದ ಶಾ, ‘ಜಗತ್ತಿನ ಯಾವುದೇ ದೇಶದಲ್ಲಿ ಬಹುಸಂಖ್ಯಾತ ಸಮುದಾಯವು ತನ್ನ ನಂಬಿಕೆಗೆ ಸಂಬಂಧಿಸಿದ ವಿಷಯಕ್ಕಾಗಿ ಇಷ್ಟು ದಿನ ಕಾಯಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜನತೆಯ ಹೋರಾಟ 1528ರಲ್ಲಿ ಪ್ರಾರಂಭವಾಯಿತು ಮತ್ತು ಅದಕ್ಕಾಗಿ ಕಾನೂನು ಹೋರಾಟ 1858ರಲ್ಲಿ ಪ್ರಾರಂಭವಾಯಿತು. 

300 ವರ್ಷದ ಈ ಹೋರಾಟ ಜನವರಿ 22ರಂದು ಕೊನೆಗೊಂಡಿತು, ಇದು ಭಾರತದ ನಂಬಿಕೆಯನ್ನು ಪುನರುಜ್ಜೀವನಗೊಳಿಸಿತು ಮತ್ತು ಶ್ರೇಷ್ಠ ಭಾರತದ ಪಯಣಕ್ಕೆ ನಾಂದಿ ಹಾಡಿತು. 

ರಾಮ ಮಂದಿರದ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಭಾರತದ ಜಾತ್ಯತೀತ ಗುಣವನ್ನು ಜಗತ್ತಿಗೆ ತೋರಿಸಿತು’ ಎಂದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಪ್ರಾಣಪ್ರತಿಷ್ಠಾಪನೆಗಾಗಿ 11 ದಿನ ಉಪವಾಸ ವ್ರತ ಆಚರಿಸಿದ್ದನ್ನು ಪ್ರಸ್ತಾಪಿಸಿದ ಶಾ, ‘ಮೋದಿ ಅವರ ಧಾರ್ಮಿಕ ಶಿಸ್ತು ಪ್ರಶಂಸಾರ್ಹವಾಗಿದೆ’ ಎಂದು ಹೊಗಳಿದರು.

ಮಂದಿರ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಶಾ, ‘ಟೀಕಾಕಾರರು ಬಿಜೆಪಿ ಭರವಸೆಗಳ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರು. ಆದರೆ ಮೋದಿ ಸರ್ಕಾರವು ತ್ರಿವಳಿ ತಲಾಖ್ ನಿಷೇಧಿಸಿತು ಮತ್ತು ಇತರ ಅನೇಕ ವಚನಗಳನ್ನು ಪೂರೈಸಿತು. 

ಬಿಜೆಪಿ ಮತ್ತು ಪಕ್ಷದ ನಾಯಕ ಮೋದಿ ಅವರು ಏನು ಹೇಳುತ್ತಾರೋ ಅದನ್ನೆಲ್ಲ ಮಾಡಿ ತೋರಿಸುತ್ತಾರೆ’ ಎಂದರು.ರಾಮಾಯಣದಿಂದ ನಮ್ಮ ಸಂಸ್ಕೃತಿ ಬೇರ್ಪಡಿಸಲಾಗದು:ಭಾರತದ ಸಂಸ್ಕೃತಿಯನ್ನು ರಾಮಾಯಣದಿಂದ ಬೇರ್ಪಡಿಸಲು ಸಾಧ್ಯವಿಲ್ಲ.

ರಾಮ ಮಂದಿರವು ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ. ಜ.22ರ ದಿನಾಂಕವು ಭವ್ಯ ಭಾರತದ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. 

ಈ ದಿನವು ಭಾರತ ಮಾತೆಯು ವಿಶ್ವಗುರು ಆಗುವ ಹಾದಿಯಲ್ಲಿ ನಮ್ಮನ್ನು ಕರೆದೊಯ್ಯಲು ದಾರಿ ಮಾಡಿಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ಜನವರಿ 22 ರಂದು ಪ್ರಾರಂಭವಾದ ಪ್ರಯಾಣವನ್ನು ಮುಂದುವರಿಸಲಾಗುವುದು ಮತ್ತು ಸಾರ್ವತ್ರಿಕ ಚುನಾವಣೆಯ ನಂತರ 2024 ರಲ್ಲಿ ಮೋದಿ ಸರ್ಕಾರವು ಮತ್ತೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾನೂನು ಪಾಲನೆ, ಸಾಮರಸ್ಯ:

ಕಾನೂನು ಮತ್ತು ಸಾಂವಿಧಾನಿಕ ಆದೇಶದ ನಂತರ ರಾಮಮಂದಿರವನ್ನು ನಿರ್ಮಿಸಲಾಗಿದೆ. ಬಿಜೆಪಿ ಈ ವಿಚಾರದಲ್ಲಿ ತಾಳ್ಮೆ ಅನುರಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸಾಮರಸ್ಯ ವಾತಾವರಣದಲ್ಲಿ ನಿರ್ಮಿಸಲಾಗಿದೆ. 

ಪ್ರಾಣಪ್ರತಿಷ್ಠಾಪನೆ ವೇಳೆ ಯಾವುದೇ ರಾಜಕೀಯ ಘೋಷಣೆ ಕೂಗಲಿಲ್ಲ. ಐಕ್ಯತೆಯ ಸಂದೇಶವನ್ನು ಸ್ವೀಕರಿಸಿ ಮತ್ತು ಮುಂದುವರಿಯಿರಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದರು.

ಅಡ್ವಾಣಿ ಯಾತ್ರೆ ಸ್ಮರಣೆ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರ ‘ರಥಯಾತ್ರೆ’ಯ ಕೊಡುಗೆಯನ್ನು ಸ್ಮರಿಸಿದ ಅವರು, ‘ಇದು ಜನರಲ್ಲಿ ಜಾಗೃತಿ ಮೂಡಿಸಿತು ಮತ್ತು ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಅಂತಿಮವಾಗಿ ಅವರ ಆಕಾಂಕ್ಷೆಗಳನ್ನು ಈಡೇರಿಸಿದರು’ ಎಂದು ಕೊಂಡಾಡಿದರು.