ಮಾಜಿ ರಾಜ್ಯಪಾಲೆ ತಮಿಳ್‌ ಸಾಯ್‌ಗೆ ಅಮಿತ್‌ ಶಾ ತಾಕೀತು?

| Published : Jun 13 2024, 12:47 AM IST / Updated: Jun 13 2024, 05:35 AM IST

ಸಾರಾಂಶ

ವೈರಲ್‌ ಆದ ಅಮಿತ್‌ ಶಾ- ತಮಿಳ್‌ಸಾಯ್‌ ಸಂವಾದದ ವಿಡಿಯೋದಲ್ಲಿ ಅಣ್ಣಾಮಲೈ ಜೊತೆ ಬಣ ಜಗಳ ಬೇಡ ಎಂದು ಅಮಿತ್‌ ಶಾ ತಾಕೀತು ಮಾಡಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ

ಅಮರಾವತಿ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರರಾಜನ್ ನಡುವಿನ ಮಾತುಕತೆಯ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್‌ ಆಗಿದೆ.

ವೇದಿಕೆ ಮೇಲೆ ಕುಳಿತಿದ್ದ ಶಾಗೆ ನಮಸ್ಕರಿಸಿ ತಮಿಳ್‌ಸಾಯ್‌ ಮುಂದೆ ಹೋಗುತ್ತಿದ್ದಂತೆ ಮತ್ತೆ ಅವರನ್ನು ಕರೆದ ಶಾ, ಅವರಿಗೆ ಏನೋ ಸೂಚನೆ ನೀಡಿದ್ದಾರೆ. ಈ ವೇಳೆ ತಮಿಳ್‌ಸಾಯ್‌ ಏನೋ ಸ್ಪಷ್ಟನೆ ನೀಡಿದರೂ ಅದಕ್ಕೆ ಒಪ್ಪದ ಶಾ, ಅಸಮಾಧಾನಗೊಂಡ ರೀತಿಯಲ್ಲೇ ಏನನ್ನೋ ಮಾತನಾಡಿದ್ದಾರೆ.

ಇಬ್ಬರ ನಡುವೆ ಏನು ಸಂವಾದ ನಡೆಯಿತು ಎಂದು ಬಹಿರಂಗವಾಗಿಲ್ಲವಾದರೂ, ತಮಿಳನಾಡಿನಲ್ಲಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ತಮಿಳ್‌ಸಾಯ್‌ ಬೆಂಬಲಿಗರ ನಡುವಿನ ಒಳಜಗಳಕ್ಕೆ ಸಂಬಂಧ ಶಾ ಕೆಲ ಸೂಚನೆಗಳನ್ನು ನೀಡಿದರು ಎಂದು ವಿಶ್ಲೇಷಿಸಲಾಗಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಮತ್ತು ತಮಿಲ್‌ಸಾಯ್‌ ಇಬ್ಬರೂ ಸೋತಿದ್ದರು.