ಜಾಮ್‌ನಗರದಿಂದ ದ್ವಾರಕಾಗೆ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ 140 ಕಿ.ಮೀ ಪಾದಯಾತ್ರೆ

| N/A | Published : Apr 02 2025, 01:01 AM IST / Updated: Apr 02 2025, 04:53 AM IST

ಸಾರಾಂಶ

ರಿಲಯನ್ಸ್‌ ಸಂಸ್ಥೆ ಮುಖ್ಯಸ್ಥ, ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಗುಜರಾತಿನ ಜಾಮ್‌ನಗರದಿಂದ ಪವಿತ್ರ ದ್ವಾರಕಾದವರೆಗೆ 140 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.

ನವದೆಹಲಿ: ರಿಲಯನ್ಸ್‌ ಸಂಸ್ಥೆ ಮುಖ್ಯಸ್ಥ, ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಗುಜರಾತಿನ ಜಾಮ್‌ನಗರದಿಂದ ಪವಿತ್ರ ದ್ವಾರಕಾದವರೆಗೆ 140 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.  

ಐದು ದಿನಗಳ ಹಿಂದೆ ಅನಂತ್ ಜಾಮ್‌ನಗರದ ತಮ್ಮ ನಿವಾಸದಿಂದ ಪಾದಯಾತ್ರೆ ಆರಂಭಿಸಿದ್ದು, ಇನ್ನು 2-4 ದಿನಗಳಲ್ಲಿ ಅವರು ದ್ವಾರಕಾ ತಲುಪಿ ಅಲ್ಲಿ ಕೃಷ್ಣನ ದರ್ಶನ ಪಡೆಯಲಿದ್ದಾರೆ. ಇದೇ ತಿಂಗಳ 10ರಂದು ಅಂಬಾನಿ ಪುತ್ರ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಆ ಪ್ರಯುಕ್ತ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇನ್ನು ಭದ್ರತೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಅವರು ರಾತ್ರಿ ಹೊತ್ತು ಪಾದಯಾತ್ರೆ ಕೈಗೊಂಡಿದ್ದಾರೆ.

ಯುಪಿ ಸರ್ಕಾರದ ಬುಲ್ಡೋಜರ್‌ ನೀತಿಗೆ ಸುಪ್ರೀಂ ತೀವ್ರ ಆಕ್ರೋಶ

ನವದೆಹಲಿ: ಉತ್ತರ ಪ್ರದೇಶದ ''''''''ಬುಲ್ಡೋಜರ್‌ ನೀತಿ'''''''' ಇದೀಗ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ವಕೀಲ ಸೇರಿ ಐವರ ಮನೆಯನ್ನು ಕೆಡವಿದ ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗರಾಜ್‌ ಡೆವಲಪ್‌ಮೆಂಟ್‌ ಅಥಾರೆಟಿ ವಿರುದ್ಧ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರದ ನಡೆಯನ್ನು ಅಕ್ರಮ ಮತ್ತು ಸಂವೇದನಾಶೀಲರಹಿತ ಎಂದು ಕರೆದಿರುವ ನ್ಯಾಯಾಲಯ, ಮನೆ ಕಳೆದುಕೊಂಡ ಪ್ರತಿಯೊಬ್ಬರಿಗೂ 6 ವಾರಗಳೊಳಗೆ ತಲಾ 10 ಲಕ್ಷ ರು. ಪರಿಹಾರ ನೀಡಲು ಸೂಚಿಸಿದೆ. ಜೊತೆಗೆ ಮನೆ ನೆಲಸಮದ ವೇಳೆ ಪುಟ್ಟ ಬಾಲಕಿಯೊಬ್ಬಳು ತನ್ನ ಮನೆಯಿಂದ ಪುಸ್ತಕ ಹಿಡಿದು ಓಡುತ್ತಿರುವ ವಿಡಿಯೋ ಪ್ರಸ್ತಾಪಿಸಿದ ನ್ಯಾಯಪೀಠ, ಇಂಥ ದೃಶ್ಯಗಳು ಎಲ್ಲರ ಮನಕಲಕುತ್ತವೆ ಎಂದಿದೆ.

2023ರಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆತಿಕ್‌ ಅಹಮದ್‌ಗೆ ಸೇರಿದ ಜಾಗವೆಂದು ತಪ್ಪಾಗಿ ತಿಳಿದು ತಮ್ಮ ಮನೆಗಳನ್ನು ಕೆಡವಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ನಿನ್ನೆಯಿಂದ ಮಧ್ಯಪ್ರದೇಶದ 19 ಧಾರ್ಮಿಕ ಸ್ಥಳಗಳಲ್ಲಿ ಮದ್ಯ ಮಾರಾಟ ನಿಷೇಧ

ಭೋಪಾಲ್: ಮಧ್ಯಪ್ರದೇಶದ ಧಾರ್ಮಿಕ ಸ್ಥಳಗಳಾದ ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ ಸೇರಿದಂತೆ ಒಟ್ಟು 19 ನಗರ ಮತ್ತು ಕೆಲವೊಂದು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಏ.1ರಿಂದ ಮದ್ಯ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ, ಮಂಡಲೇಶ್ವರ, ಓರ್ಚಾ, ಮೈಹಾರ್‌, ಚಿತ್ರಕೂಟ, ದಾಟಿಯಾ,ಪನ್ನಾ, ಮಂಡಲಾ, ಮುಲ್ತೈ, ಮಂಡಸೌರ್ ಮತ್ತು ಅಮರಕಂಟಕ್ ನಗರ ವ್ಯಾಪ್ತಿಯಲ್ಲಿ ಮತ್ತು ಸಲ್ಕನ್‌ಪುರ, ಕುಂದಲ್ಪುರ, ಬಂದಕ್‌ಪುರ, ಬರ್ಮನ್‌ಕಲನ್, ಬರ್ಮನ್‌ಖುರ್ಡ್‌ ಮತ್ತು ಲಿಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲ ಬಾರ್ ಮತ್ತು ಮದ್ಯದ ಅಂಗಡಿಯನ್ನು ಏ.1ರಿಂದ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಧಾರ್ಮಿಕ ಪ್ರದೇಶಗಳ ಮೇಲಿನ ಜನರ ನಂಬಿಕೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದ್ದಾರೆ.

11 ಸ್ಥಳಗಳಿಗೆ ಹಿಂದೂ ಹೆಸರಿಟ್ಟು ಉತ್ತರಾಖಂಡ ಸಿಎಂ ಆದೇಶ

ಡೆಹ್ರಾಡೂನ್: ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ 11 ಸ್ಥಳಗಳನ್ನು ಮರುನಾಮಕರಣ ಮಾಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ‘ಸಾರ್ವಜನಿಕ ಭಾವನೆ ಮತ್ತು ಭಾರತೀಯ ಸಂಸ್ಕೃತಿ, ಪರಂಪರೆಗಳಿಗೆ ಅನುಗುಣವಾಗಿ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುತ್ತಿದ್ದೇವೆ. ಭಾರತೀಯ ಸಂಸ್ಕೃತಿ ಮತ್ತು ಅದರ ಉಳಿವಿಗೆ ಕೊಡುಗೆ ನೀಡಿದ ಮಹನೀಯರ ಹೆಸರುಗಳನ್ನು ಅವುಗಳಿಗೆ ಇಡಲಾಗುತ್ತದೆ’ ಎಂದು ಧಾಮಿ ತಿಳಿಸಿದ್ದಾರೆ.ಯಾವ ಊರಿಗೆ ಯಾವ ಹೆಸರು?:

ಹೊಸ ಘೋಷಣೆಯಂತೆ, ಹರಿದ್ವಾರದ ಔರಂಗಜೇಬಪುರ ಶಿವಾಜಿ ನಗರವಾಗಿ, ಘಾಜಿವಾಲಿ ಆರ್ಯಪುರವಾಗಿ, ಚಾಂದ್‌ಪುರ ಜ್ಯೋತಿಭಾ ಫುಲೆ ನಗರವಾಗಿ, ಮೊಹಮ್ಮದ್‌ಪುರ ಜಾಟ್ ಮೋಹನ್‌ಪುರ ಜಾಟ್‌ ಆಗಿ, ಖಾನ್‌ಪುರ ಶ್ರೀಕೃಷ್ಣಪುರವಾಗಿ, ಖಾನ್‌ಪುರ ಕುರ್ಸಾಲಿ ಅಂಬೇಡ್ಕರ್ ನಗರವಾಗಿ, ಇದ್ರಿಶ್‌ಪುರ ನಂದಪುರವಾಗಿ ಮತ್ತು ಅಕ್ಬರ್ ಫಾಜಲ್‌ಪುರ ವಿಜಯನಗರವಾಗಿ ಬದಲಾಗಲಿವೆ.ಡೆಹ್ರಾಡೂನ್ ಜಿಲ್ಲೆಯಲ್ಲಿ ಮಿಯಾನ್‌ವಾಲಾವನ್ನು ರಾಮ್‌ಜಿವಾಲಾ, ಪಿರ್ವಾಲಾವನ್ನು ಕೇಸರಿ ನಗರ, ಚಂದ್‌ಪುರ್ ಖುರ್ದ್ ಅನ್ನು ಪೃಥ್ವಿರಾಜ್ ನಗರ ಮತ್ತು ಅಬ್ದುಲ್ಲಾಪುರವನ್ನು ದಕ್ಷನಗರ ಎಂದು ಬದಲಾಯಿಸಲಾಗುತ್ತದೆ.

ನೈನಿತಾಲ್ ಜಿಲ್ಲೆಯ ನವಾಬಿ ರಸ್ತೆಯನ್ನು ಅಟಲ್ ಮಾರ್ಗ ಮತ್ತು ಪಂಚಕ್ಕಿ-ಐಟಿಐ ಮಾರ್ಗವನ್ನು ಗುರು ಗೋಳ್ವಲಕರ್ ಮಾರ್ಗ ಎಂದು ಮರುನಾಮಕರಣ ಮಾಡಲಾಗುತ್ತದೆ.ಉಧಮ್ ಸಿಂಗ್ ನಗರ ಜಿಲ್ಲೆಯ ಸುಲ್ತಾನಪುರ ಪಟ್ಟಿಯನ್ನು ಕೌಶಲ್ಯಪುರಿ ಎಂದು ಬದಲಿಸಲು ನಿರ್ಣಯಿಸಲಾಗಿದೆ.