ಸಾರಾಂಶ
8 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಕೊಂದು ಶವವನ್ನು ನೀರಿನ ಕಾಲುವೆಗೆ ಎಸೆದ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ನಂದ್ಯಾಲ: 8 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಕೊಂದು ಶವವನ್ನು ನೀರಿನ ಕಾಲುವೆಗೆ ಎಸೆದ ಘಟನೆ ಭೀಕರ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಪೊಲೀಸರು ಬುಧವಾರ ಮೂವರು ಅಪ್ರಾಪ್ತರನ್ನು ಅನುಮಾನದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
ಘಟನೆ ಹಿನ್ನೆಲೆ:
ಪಗಿಡ್ಯಾಳ ಎಂಬ ಊರಿನಲ್ಲಿ ಪಾರ್ಕ್ನೊಂದರಲ್ಲಿ ಭಾನುವಾರ ಬಾಲಕಿ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ಬಾಲಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ನಂತರ ಈ ದೌರ್ಜನ್ಯದ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ಹೇಳುತ್ತಾಳೆ ಎಂಬ ಭಯದಿಂದ ಆಕೆಯನ್ನು ಕೊಲೆ ಮಾಡಿ ಶವವನ್ನು ಸಮೀಪದ ಕಾಲುವೆಯಲ್ಲಿ ಎಸೆದು ಪರಾರಿಯಾಗಿದ್ದರು.
ಈ ನಡುವೆ ಮಗಳು ಕಾಣೆಯಾಗಿದ್ದಾಳೆಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಪಾರ್ಕ್‌ನ ಸುತ್ತಮುತ್ತ ಸ್ನಿಪರ್ ನಾಯಿಗಳ ಸಹಾಯದಿಂದ ಶೋಧ ನಡೆಸಿ ಕಾಲುವೆಯಲ್ಲಿದ್ದ ಬಾಲಕಿಯ ಶವ ಪತ್ತೆಹಚ್ಚಿದ್ದಾರೆ. ಬಳಿಕ ಅದೇ ನಾಯಿಗಳು ಮೂವರು ಅಪ್ರಾಪ್ತ ಬಾಲಕರ ನಿವಾಸಗಳಿರುವ ಪ್ರದೇಶಕ್ಕೆ ಪೊಲೀಸರನ್ನು ಕರೆದೊಯ್ದಿವೆ. ಪೊಲೀಸರು ಮೂವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾವೇ ಈ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರರು 12 ಮತ್ತು 13 ವರ್ಷ ವಯಸ್ಸಿನವರಾಗಿದ್ದು 7ನೇ ತರಗತಿಯಲ್ಲಿ ಓದುತ್ತಿದ್ದಾರೆ.