ದೇಶದಲ್ಲಿ ಡೇಟಾ ಅಗ್ಗವಿದೆ ಎಂದು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ. ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿ. ಅರೆಮನಸ್ಸಿನ ಶಿಕ್ಷಣವು ಎಂದಿಗೂ ಜೀವನವನ್ನು ಯಶಸ್ವಿಗೊಳಿಸುವುದಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

- ಡೇಟಾ ಅಗ್ಗವೆಂದು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಬೇಡ

- ಹಣಕ್ಕಾಗಿ ಗೇಮ್ ಆಟ ವಿನಾಶಕ್ಕೆ ದಾರಿ, ಅದಕ್ಕೇ ನಿಷೇಧ- ಎಐ ಸದ್ಬಳಕೆ ಮಾಡಿ, ಶಿಕ್ಷಣದಿಂದ ಜೀವನ ಕೌಶಲ್ಯ ವೃದ್ಧಿಸಿಕೊಳ್ಳಿ

- ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಕರೆ

===ಮೋದಿ ಪರೀಕ್ಷಾ ಪೇ.. ಸಲಹೆಗಳು

-ಭಾರತೀಯ ಕಥೆ ಆಧರಿತ ಹೊಸ ಗೇಮ್‌ಗಳನ್ನು ಸೃಷ್ಟಿಸಿ-ಜೀವನ ಮತ್ತು ಶೈಕ್ಷಣಿಕ ಕೌಶಲ್ಯ ಎರಡನ್ನೂ ಹೆಚ್ಚಿಸಿಕೊಳ್ಳಿ

-ಸಲಹೆ ಪಡೆಯಿರಿ, ಆದರೆ ನಿಮ್ಮದೇ ಶೈಲಿ ರೂಢಿಸಿಕೊಳ್ಳಿ -ಭೂತಕಾಲದ ಬಗ್ಗೆ ಯೋಚಿಸದೆ, ಭವಿಷ್ಯದ ಚಿಂತನೆ ನಡೆಸಿ

- ಉತ್ತಮ ಶಿಕ್ಷಕರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ

--

ಪಿಟಿಐ ನವದೆಹಲಿ

ದೇಶದಲ್ಲಿ ಡೇಟಾ ಅಗ್ಗವಿದೆ ಎಂದು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ. ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿ. ಅರೆಮನಸ್ಸಿನ ಶಿಕ್ಷಣವು ಎಂದಿಗೂ ಜೀವನವನ್ನು ಯಶಸ್ವಿಗೊಳಿಸುವುದಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ತಮ್ಮ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ನಮ್ಮ ಗುರಿ ಹೇಗಿರಬೇಕೆಂದರೆ, ಅದು ನಮ್ಮ ವ್ಯಾಪ್ತಿಯಲ್ಲಿ ಇರಬೇಕು, ಆದರೆ ಸುಲಭವಾಗಿ ಕೈಗೆಟುಕುವಂತಿರಬಾರದು. ಮೊದಲು ಮನಸ್ಸನ್ನು ಪಳಗಿಸಿ. ನಂತರ ಅದನ್ನು ಜೋಡಿಸಿ, ಅಧ್ಯಯನ ಮಾಡಬೇಕಾದ ವಿಷಯಗಳನ್ನು ಅದರಲ್ಲಿ ತುಂಬಿ. ಆಗ ಯಶಸ್ವಿಯಾಗುತ್ತೀರಿ. ಭಾರತದಲ್ಲಿ ಡೇಟಾ ಅಗ್ಗವಾಗಿದೆ ಎಂಬ ಕಾರಣಕ್ಕೆ ಗೇಮಿಂಗ್‌ನಲ್ಲಿ ಸಮಯ ಕಳೆಯಬೇಡಿ. ಹಣಕ್ಕಾಗಿ ಗೇಮಿಂಗ್‌ನಲ್ಲಿ ತೊಡಗುವವರು ಹಾಳಾಗುತ್ತಾರೆ. ನಾವು ದೇಶದಲ್ಲಿ ಜೂಜಾಟವನ್ನು ಪ್ರೋತ್ಸಾಹಿಸುವುದಿಲ್ಲ. ಆನ್‌ಲೈನ್ ಜೂಜಾಟದ ವಿರುದ್ಧ ನಾನು ಕಾನೂನು ಮಾಡಿದ್ದೇನೆ’ ಎಂದರು. ಗೇಮ್‌ ಸೃಷ್ಟಿಕರ್ತರಾಗಿ: ‘ಆಟ (ಗೇಮಿಂಗ್‌) ಕೇವಲ ಹವ್ಯಾಸವಲ್ಲ, ಅದು ಒಂದು ಕೌಶಲ್ಯ. ಇದರಲ್ಲಿ ವೇಗವೂ ಸೇರಿದೆ. ಆದ್ದರಿಂದ ಇದು ಬೆಳವಣಿಗೆಗೆ ಒಳ್ಳೆಯದು. ಉತ್ತಮ ಗುಣಮಟ್ಟದ ಆಟವನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಜೊತೆಗೆ ಅಧ್ಯಯನದಲ್ಲೂ ಪರಿಣತಿ ಸಾಧಿಸುವತ್ತ ಗಮನಹರಿಸಿ. ನೀವು ನಿಮ್ಮದೇ ಆಟವನ್ನು ಸೃಷ್ಟಿ ಮಾಡಿ, ಅದನ್ನು ಉದ್ಘಾಟಿಸಿ. ನನ್ನ ಮಗ/ಮಗಳು ಇನ್ನೂ ಚಿಕ್ಕವರು. ಈಗಾಗಲೇ ಸಾಕಷ್ಟು ಫಾಲೋವರ್ಸ್‌ ಹೊಂದಿದ್ದಾರೆ ಎಂದು ನಿಮ್ಮ ಕುಟುಂಬವೇ ಕೊಂಡಾಡುವಂತೆ ಮಾಡಿ. ನಿಧಾನವಾಗಿ ನಿಮ್ಮ ಪಾಲಕರೇ ನಿಮಗೆ ಐಡಿಯಾಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ, ಹನುಮಂತನ ಕಥೆ ಅಥವಾ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿದ್ದರ ಕುರಿತು ಗೇಮ್‌ಗಳನ್ನು ಸೃಷ್ಟಿಮಾಡಿ. ಭಾರತದಲ್ಲಿ ಅಂಥ ಸಾಕಷ್ಟು ಕಥೆಗಳಿವೆ. ಪಂಚತಂತ್ರದ ಮೇಲೆ ಆಟವನ್ನು ನಿರ್ಮಿಸಲು ಎಂದಾದರೂ ಯೋಚಿಸಿದ್ದೀರಾ? ನೀವು ಆಟದ ಸೃಷ್ಟಿಕರ್ತರಾಗಬಹುದು ಮತ್ತು ಸಾಮಾಜಿಕ ಮಾಧ್ಯಮ ಪುಟವನ್ನು ಸಹ ತೆರೆಯಬಹುದು’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ನಿಮ್ಮದೇ ಶೈಲಿ ರೂಢಿಸಿಕೊಳ್ಳಿ: ‘ನಾನು ಪ್ರಧಾನಿಯಾದೆ. ಈಗಲೂ ನನಗೆ ಜನ ವಿಭಿನ್ನ ಮಾರ್ಗಗಳಲ್ಲಿ ಕೆಲಸ ಮಾಡುವಂತೆ ಹೇಳುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿಯಿರುತ್ತದೆ. ಕೆಲವರು ಬೆಳಿಗ್ಗೆ ಚೆನ್ನಾಗಿ ಓದುತ್ತಾರೆ, ಇನ್ನು ಕೆಲವರು ರಾತ್ರಿ. ನಿಮಗೆ ಯಾವುದು ಹೊಂದಿಕೆಯಾಗುತ್ತದೆಯೋ ಅದರಲ್ಲಿ ನಂಬಿಕೆಯಿಡಿ. ಆದರೆ ಸಲಹೆಯನ್ನೂ ಪಡೆದುಕೊಳ್ಳಿ. ಅದು ನಿಮಗೆ ಪ್ರಯೋಜನ ಉಂಟುಮಾಡುತ್ತದೆ ಎಂದಾದರೆ ಮಾತ್ರ ನಿಮ್ಮ ಜೀವನಶೈಲಿಗೆ ಸೇರ್ಪಡೆ ಮಾಡಿಕೊಳ್ಳಿ. ನಾನು ಪರೀಕ್ಷಾ ಪೇ ಚರ್ಚಾ ಆರಂಭಿಸುವಾಗ ಒಂದು ಶೈಲಿಯಿತ್ತು. ಕ್ರಮೇಣ ನಾನದರಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಬಂದೆ. ಈ ಸಲ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿದೆ. ಆದರೆ ನನ್ನ ಮೂಲ ಶೈಲಿಯನ್ನು ಬಿಟ್ಟುಕೊಡಲಿಲ್ಲ’ ಎಂದು ತಿಳಿಸಿದರು. ಜ್ಞಾನದಿಂದ ಕೌಶಲ್ಯ:

‘ಎರಡು ರೀತಿಯ ಕೌಶಲ್ಯಗಳಿರುತ್ತವೆ. ಒಂದು ಜೀವನ ಕೌಶಲ್ಯ, ಇನ್ನೊಂದು ವೃತ್ತಿ ಕೌಶಲ್ಯ. ಎರಡೂ ಜೊತೆಜೊತೆಯಲ್ಲೇ ಇರುತ್ತವೆ. ಕೌಶಲ್ಯವು ಜ್ಞಾನದಿಂದ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನ, ವಿಶ್ರಾಂತಿ, ಕೌಶಲ್ಯ ಮತ್ತು ಹವ್ಯಾಸ ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳಬೇಕು. ಬೆಳವಣಿಗೆಗೆ ಇದೇ ಕೀಲಿಕೈ. ನಾವು ಕೇವಲ ಅಂಕಗಳ ಮೇಲೆ ಗಮನಹರಿಸಬಾರದು, ಬದಲಾಗಿ ಜೀವನದ ಸುಧಾರಣೆಯತ್ತ ಗಮನ ಹರಿಸಬೇಕು. ಅದು ತರಗತಿ ಕೊಠಡಿಗಳು ಮತ್ತು ಪರೀಕ್ಷೆಗಳನ್ನು ಮೀರಿದ್ದು’ ಎಂದು ಮೋದಿ ನುಡಿದರು. ಭೂತಕಾಲದ ಬಗ್ಗೆ ಯೋಚಿಸಬೇಡಿ: ‘ನನಗೆ ನಾಯಕರೊಬ್ಬರು ಕರೆ ಮಾಡಿ, ನೀವು 75 ವರ್ಷಗಳನ್ನು ಪೂರ್ಣಗೊಳಿಸಿದ್ದೀರಿ’ ಎಂದರು. ಅದಕ್ಕೆ ನಾನು, ‘ಇನ್ನೂ 25 ವರ್ಷ ಬಾಕಿ ಇದೆ’ ಎಂದು ಚಟಾಕಿ ಹಾರಿಸಿದೆ. ನಾನು ಹಿಂದಿನದನ್ನು ಲೆಕ್ಕ ಹಾಕುವುದಿಲ್ಲ. ಮುಂದೆ ಉಳಿದಿದ್ದನ್ನು ಮಾತ್ರ ಲೆಕ್ಕ ಹಾಕುತ್ತೇನೆ. ನಾನು ನಿಮಗೆ ಹೇಳುವುದೇನೆಂದರೆ, ಭೂತಕಾಲದ ಬಗ್ಗೆ ಯೋಚಿಸಬೇಡಿ. ನಿಮ್ಮ ಮುಂದೆ ಯಾವುದಿದೆಯೋ ಅದನ್ನು ಜೀವಿಸಲು ಪ್ರಯತ್ನಿಸಿ’ ಎಂದು ಕರೆ ನೀಡಿದರು.ವಿಕಸಿತ ಭಾರತಕ್ಕೆ ಕೈಜೋಡಿಸಿ: ‘2047ರಲ್ಲಿ ನೀವೆಲ್ಲರೂ 35-40 ವರ್ಷ ವಯಸ್ಸಿನವರಾಗಿರುತ್ತೀರಿ. ವಿಕಸಿತ ಭಾರತವನ್ನು ನಿರ್ಮಿಸಲು ನಾನು ಯಾರಿಗಾಗಿ ಶ್ರಮಿಸುತ್ತಿದ್ದೇನೆ? ನೀವು ಸಹ ಅದರ ಕಡೆಗೆ ಕೆಲಸ ಮಾಡಬೇಕಲ್ಲವೇ? ನೀವು ಇದಕ್ಕೆ ಹೇಗೆಲ್ಲ ಕೊಡುಗೆ ನೀಡಬಹುದು ಎಂದು ಯೋಚಿಸಿ. ಪ್ರತಿನಿತ್ಯ ನೀವು ಬಳಸುವ ವಸ್ತುಗಳನ್ನು ಪಟ್ಟಿ ಮಾಡಿ. ಅದರಲ್ಲಿ ಎಷ್ಟು ವಸ್ತುಗಳು ವಿದೇಶದಿಂದ ಆಮದಾದವು ಎಂದು ಯೋಚಿಸಿ. ಸ್ವದೇಶಿಯನ್ನು ಬಳಸುವ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ’ ಎಂದು ವಿನಂತಿಸಿದರು.ಎಐ ಸದುಪಯೋಗಪಡಿಸಿಕೊಳ್ಳಿ: ‘ಯಾವೆಲ್ಲ ಉತ್ತಮ ಜೀವನಚರಿತ್ರೆಗಳನ್ನು ಓದಬಹುದು ಎಂದು ನೀವು ಎಐ ಬಳಿ ಸಲಹೆ ಕೇಳಬಹುದು. ಅದು ಸೂಚಿಸಿದ ಒಂದು ಪುಸ್ತಕವನ್ನು ಮಾರುಕಟ್ಟೆಗೆ ತೆರಳಿ ಕೊಂಡುಕೊಳ್ಳಬಹುದು. ಎಐ ತಂತ್ರಜ್ಞಾನವನ್ನು ಹೀಗೆ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು ಅದರ ಮೇಲೆ ಅವಲಂಬಿತರಾಗಬಾರದು. ತಂತ್ರಜ್ಞಾನ ಕಲಿಕೆಯನ್ನು ಸುಲಬಗೊಳಿಸಬೇಕು, ಆದರೆ ಶ್ರಮಹೀನರನ್ನಾಗಿಸಬಾರದು. ವಿದ್ಯಾರ್ಥಿಗಳು ಡಿಜಿಟಲ್ ಪರಿಕರಗಳನ್ನು ಶಿಸ್ತಿನಿಂದ, ಓದಿಗಾಗಿ ಬಳಸಿಕೊಳ್ಳಬೇಕು’ ಎಂದು ಪ್ರಧಾನಿ ತಿಳಿಸಿದರು.

ಶಿಕ್ಷಕರಿಗೆ ಕರೆ:‘ಕೆಲವೊಮ್ಮೆ ಶಿಕ್ಷಕರು ಮುಖ್ಯವಾದುದನ್ನು ಮಾತ್ರ ಕಲಿಸುತ್ತಾರೆ ಮತ್ತು ಉತ್ತಮ ಅಂಕಗಳನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತಾರೆ, ಆದರೆ ಒಳ್ಳೆಯ ಶಿಕ್ಷಕರು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಕಲಿಸುತ್ತಾರೆ. ಜೀವನವು ಕೇವಲ ಪರೀಕ್ಷೆಗಳ ಬಗ್ಗೆ ಅಲ್ಲ. ಶಿಕ್ಷಣವು ನಮ್ಮ ಬೆಳವಣಿಗೆಯ ಮಾಧ್ಯಮ’ ಎಂದು ಶಿಕ್ಷಕರಿಗೂ ಪ್ರಧಾನಿ ಕಿವಿಮಾತು ಹೇಳಿದರು.