ಸಾರಾಂಶ
ಈಗಾಗಲೇ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ದೇಶದಲ್ಲೇ ಅತಿ ಹೆಚ್ಚು, 10 ಸಾವಿರ ಸಂಬಳ ನೀಡುತ್ತಿರುವ ಸಿಎಂ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಇದೀಗ ಅವರಿಗೆ ಗ್ರಾಚ್ಯುಟಿ, ವೇತನ ಸಹಿತ ಮಾತೃತ್ವ ರಜೆಯಂತಹ ಸವಲತ್ತುಗಳನ್ನು ನೀಡಲು ಮುಂದಾಗಿದೆ.
ಅಮರಾವತಿ: ಈಗಾಗಲೇ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ದೇಶದಲ್ಲೇ ಅತಿ ಹೆಚ್ಚು, 10 ಸಾವಿರ ಸಂಬಳ ನೀಡುತ್ತಿರುವ ಸಿಎಂ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಇದೀಗ ಅವರಿಗೆ ಗ್ರಾಚ್ಯುಟಿ, ವೇತನ ಸಹಿತ ಮಾತೃತ್ವ ರಜೆಯಂತಹ ಸವಲತ್ತುಗಳನ್ನು ನೀಡಲು ಮುಂದಾಗಿದೆ. ಮಾ.1ರಂದು ಆರೋಗ್ಯ ಇಲಾಖೆಯ ಪರಿಶೀಲನಾ ಸಭೆ ವೇಳೆ ಈ ಕ್ರಮಗಳಿಗೆ ಅನುಮೋದನೆ ನೀಡಿದ ಸಿಎಂ, ಗ್ರಾಚ್ಯುಟಿ ಪಾವತಿಯನ್ನು ನಿಗದಿಪಡಿಸಲು, ಆಶಾ ಕಾರ್ಯಕರ್ತೆಯರ ವೇತನ, ಲಭ್ಯವಿರುವ ಸೌಲಭ್ಯ, ಅನ್ಯ ರಾಜ್ಯಗಳಲ್ಲಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರನ್ವಯ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲಾಗುವುದು ಹಾಗೂ ಮೊದಲ 2 ಹೆರಿಗೆಗಳ ಸಮಯದಲ್ಲಿ 6 ತಿಂಗಳ(180 ದಿನ)ವರೆಗೆ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ಜೊತೆಗೆ, 30 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ 1.5 ಲಕ್ಷ ರು. ಗ್ರಾಚ್ಯುಟಿ ನೀಡುವ ಮೂಲಕ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗುವುದು. ಈ ಮೂಲಕ, ಆಂಧ್ರಪ್ರದೇಶ ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ನೀಡಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ಒಟ್ಟು 42,752 ಕಾರ್ಯಕರ್ತೆಯರು ಇವುಗಳ ಲಾಭ ಪಡೆಯಲಿದ್ದಾರೆ.ಪ್ರಸ್ತುತ ಉತ್ತರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ 750 ರು., ಹಿಮಾಚಲ ಪ್ರದೇಶದಲ್ಲಿ 2 ಸಾವಿರ ರು., ರಾಜಸ್ಥಾನದಲ್ಲಿ 2,700 ರು,. ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ 3 ಸಾವಿರ ರು., ಕರ್ನಾಟಕ ಹಾಗೂ ಹರ್ಯಾಣದಲ್ಲಿ 4 ಸಾವಿರ ರು., ಕೇರಳದಲ್ಲಿ 5 ಸಾವಿರ ರು., ಸಿಕ್ಕಿಂನಲ್ಲಿ 6 ಸಾವಿರ ರು., ತೆಲಂಗಾಣದಲ್ಲಿ 7.5 ಸಾವಿರ ರು. ವೇತನ ನೀಡಲಾಗುತ್ತಿದೆ.