2024ರ ವಾರ್ಷಿಕ ಶಿಕ್ಷಣ ವರದಿ: ಶೇ.25ರಷ್ಟು ಗ್ರಾಮೀಣ ಮಕ್ಕಳಿಗೆ ತಮ್ಮದೇ ಭಾಷೆ ಓದಲು ಬರಲ್ಲ!

| Published : Jan 19 2024, 01:53 AM IST / Updated: Jan 19 2024, 09:20 AM IST

2024ರ ವಾರ್ಷಿಕ ಶಿಕ್ಷಣ ವರದಿ: ಶೇ.25ರಷ್ಟು ಗ್ರಾಮೀಣ ಮಕ್ಕಳಿಗೆ ತಮ್ಮದೇ ಭಾಷೆ ಓದಲು ಬರಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

2024ರ ವಾರ್ಷಿಕ ಶಿಕ್ಷಣ ವರದಿಯಲ್ಲಿ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಹಲವು ಗ್ರಾಮೀಣ ಗಂಡು ಮಕ್ಕಳಿಗೆ ತಮ್ಮದೇ ಮಾತೃಭಾಷೆಯನ್ನು ಸರಾಗವಾಗಿ ಓದಲು ಬರುವುದಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ 12ನೇ ತರಗತಿ ಬಳಿಕ ಓದಲು ಹುಡುಗಿಯರಿಗೇ ಹೆಚ್ಚು ಆಸಕ್ತಿ ಇರುವುದಾಗಿ ವರದಿ ತಿಳಿಸಿದೆ.

ನವದೆಹಲಿ: ಭಾರತದ ಗ್ರಾಮೀಣ ಪ್ರದೇಶದ 14 ರಿಂದ 18 ವರ್ಷ ವಯಸ್ಸಿನ ಶೇ.25ರಷ್ಟು ಮಕ್ಕಳಿಗೆ ತಮ್ಮದೇ ಮಾತೃಭಾಷೆಯ 2ನೇ ತರಗತಿ ಪಠ್ಯಪುಸ್ತಕವನ್ನೂ ಸರಿಯಾಗಿ ಓದಲು ಬರುವುದಿಲ್ಲ. 

ಅಲ್ಲದೇ ಇದೇ ವಯಸ್ಸಿನ ಶೇ.43ರಷ್ಟು ಮಕ್ಕಳಿಗೆ ಸಾಮಾನ್ಯ ಇಂಗ್ಲಿಷ್‌ ವಾಕ್ಯವನ್ನು ಓದಲು ಸಾಧ್ಯವಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ವಾರ್ಷಿಕ ಶಿಕ್ಷಣ ವರದಿ (ಎಎಸ್‌ಇಆರ್‌ 2024) ಪ್ರಕಟಿಸಿದೆ.

ಬುಧವಾರ ಎಎಸ್‌ಇಆರ್‌ ಬಿಡುಗಡೆ ಮಾಡಿದ ವರದಿಯ ಪ್ರಕಾರ ಗ್ರಾಮೀಣ ಭಾಗದ 14 ರಿಂದ 18 ವರ್ಷ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಮಕ್ಕಳಿಗೆ ಸರಳ ಭಾಗಾಕಾರ ಲೆಕ್ಕಗಳನ್ನು ಮಾಡಲು ಬರಲ್ಲ. 

ಶೇ.76ರಷ್ಟು ಬಾಲಕಿಯರು ತಮ್ಮ ಪ್ರಾದೇಶಿಕ ಭಾಷೆಯಲ್ಲಿ 2 ತರಗತಿಯ ಪಠ್ಯವನ್ನು ಓದುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಪುರುಷರಲ್ಲಿ ಈ ಪ್ರಮಾಣ ಶೇ.70.9ರಷ್ಟಿದೆ. 

26 ರಾಜ್ಯಗಳ ಒಟ್ಟು 28 ಜಿಲ್ಲೆಗಳಾದ್ಯಂತ ಸುಮಾರು 34,745 ಯುವಕರನ್ನು ಸಮೀಕ್ಷೆಗೊಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. 

ಸ್ಮಾರ್ಟ್‌ಫೋನ್‌: ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶೇ.90ರಷ್ಟು ಯುವಜನರ ಬಳಿ ಸ್ಮಾರ್ಟ್‌ಫೋನ್‌ಗಳಿದ್ದು ಅವುಗಳನ್ನು ಹೇಗೆ ಬಳಸಬೇಕೆಂಬುದೂ ಅವರಿಗೆ ತಿಳಿದಿದೆ. 

ಈ ಪೈಕಿ ಶೇ.43.7ರಷ್ಟು ಪುರುಷರ ಬಳಿ ಹಾಗೂ ಶೇ.19ರಷ್ಟು ಯುವತಿಯರ ಬಳಿ ಸ್ಮಾರ್ಟ್‌ಫೋನ್‌ಗಳಿವೆ. ಹೀಗಾಗಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಾಗಿ ತಮ್ಮದೇ ಸ್ವಂತ ಮೊಬೈಲ್‌ಗಳನ್ನು ಹೊಂದಿದ್ದಾರೆ. 

ಅಲ್ಲದೇ ಗ್ರಾಮೀಣ ಭಾಗದಲ್ಲಿ ಶೇ.9ರಷ್ಟು ಜನರು ಮಾತ್ರ ತಮ್ಮ ಮನೆಯಲ್ಲಿ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಎರಡರಲ್ಲಿ ಒಂದನ್ನು ಹೊಂದಿದ್ದಾರೆ ಎಂದು ಎಎಸ್‌ಇಆರ್‌ ಹೇಳಿದೆ.

ಓದಿನಲ್ಲಿ ಹುಡುಗಿಯರಿಗೇ ಹೆಚ್ಚು ಆಸಕ್ತಿ: 12ನೇ ತರಗತಿ ಮುಗಿದ ಬಳಿಕ ಹುಡುಗರಿಗಿಂತ ಹುಡುಗಿಯರೇ ಮುಂದೆ ಓದಲು ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. 

ಹುಡುಗರು 12ನೇ ತರಗತಿ ಬಳಿಕ ಓದಲು ಅಷ್ಟಾಗಿ ಆಸಕ್ತಿ ಹೊಂದಿರುವುದಿಲ್ಲ. ಅವರು ತಮ್ಮ ಶಿಕ್ಷಣವನ್ನು ನಿಲ್ಲಿಸುವ ನಿರ್ಧಾರಕ್ಕೆ ಮುಂದಾಗುತ್ತಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.