ಸಾರಾಂಶ
ಪಟನಾ: ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣಗಳು ಮುಂದುವರೆದಿದ್ದು, ಗುರುವಾರ ಕಿಶನ್‌ಗಂಜ್ ಜಿಲ್ಲೆಯಲ್ಲಿ ಮಳೆಯ ಹೊಡೆತ ತಾಳಲಾಗದೇ ಸೇತುವೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ನಡೆದಾಗ ಸೇತುವೆ ಮೇಲೆ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಆಘಾತಕಾರಿ ವಿಷಯವೆಂದರೆ ಕೇವಲ ಒಂದು ವಾರದ ಅವಧಿಯಲ್ಲಿ ಬಿಹಾರದಲ್ಲಿ ದಾಖಲಾದ 4ನೇ ಸೇತುವೆ ಕುಸಿತದ ಪ್ರಕರಣ ಇದಾಗಿದೆ. ಇದು ಬಿಹಾರದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುವ ಭಾರೀ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿದೆ.
ಮಳೆಗೆ ಕುಸಿತ:
ಕಿಶನ್‌ಗಂಜ್ ಜಿಲ್ಲೆಯ ಬಹಾದ್ದೂರ್‌ಗಂಜ್ ಪ್ರದೇಶದಲ್ಲಿ ಮದಿಯಾ ನದಿಗೆ 70 ಮೀ. ಉದ್ದ ಮತ್ತು 12 ಮೀಟರ್ ಅಗಲದ ಸೇತುವೆಯೊಂದನ್ನು 2011ರಲ್ಲಿ ನಿರ್ಮಿಸಲಾಗಿತ್ತು. ಗುರುವಾರ ಈ ಪ್ರದೇಶದಲ್ಲಿ ಮಳೆ ಸುರಿದು ಸಣ್ಣ ಪ್ರವಾಹ ಕಾಣಿಸಿಕೊಂಡಿತ್ತು. ಪ್ರವಾಹದ ರಭಸಕ್ಕೆ ಸೇತುವೆಯ ಒಂದು ಕಂಬ ಕುಸಿದು ಬಿದ್ದಿದೆ. ಸದ್ಯ ಸೇತುವೆಯನ್ನು ಬಳಕೆಗೆ ನಿರ್ಬಂಧಿಸಿ ರಿಪೇರಿ ಕೆಲಸ ಆರಂಭಿಸಲಾಗಿದೆ.
3 ಸೇತುವೆ ಕುಸಿತ:
ಕಳೆದ ಒಂದು ವಾರದ ಅವಧಿಯಲ್ಲಿ ಅರಾರಿಯಾ ಜಿಲ್ಲೆಯಲ್ಲಿ ಎರಡು ಮತ್ತು ಸಿವಾನ್ ಜಿಲ್ಲೆಯಲ್ಲಿ ಒಂದು ಸೇತುವೆ ಕುಸಿತದ ದುರ್ಘಟನೆ ಸಂಭವಿಸಿತ್ತು.
ಕಾರಣ ಏನು?:
ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಂದ ಕಾಮಗಾರಿ, ಕಾಮಗಾರಿ ಮೇಲೆ ಅಧಿಕಾರಿಗಳ ನಿಗಾ ಇಲ್ಲದೇ ಇರುವುದು, ಕಾಮಗಾರಿ ಟೆಂಡರ್‌ಗೆ ಭಾರೀ ಲಂಚಕ್ಕೆ ಬೇಡಿಕೆ, ಹೀಗಾಗಿ ಕಳಪೆ ವಸ್ತುಗಳನ್ನು ಬಳಸಿ ಗುತ್ತಿಗೆದಾರರು ಸೇತುವೆ ನಿರ್ಮಿಸುತ್ತಿರುವುದೇ ಸೇತುವೆ ಕುಸಿತದ ಘಟನೆಗೆ ಕಾರಣ ಎನ್ನಲಾಗುತ್ತಿದೆ.