ಸಾರಾಂಶ
ಹಾಜಿಪುರ: ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರಿದಿದ್ದು, ವೈಶಾಲಿ ಜಿಲ್ಲೆಯ ರಾಘೋಪುರದಲ್ಲಿ ಶನಿವಾರ ಸಣ್ಣ ಸೇತುವೆಯೊಂದು ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘20 ವರ್ಷ ಹಳೆಯದಾಗಿದ್ದ ಈ ಸೇತುವೆ ನೀರಿನ ರಭಸದಿಂದ ಹಾನಿಗೊಳಗಾಗಿತ್ತು. ಆದ್ದರಿಂದ ಅದರ ಬಳಕೆಯನ್ನು 2021ರಲ್ಲೇ ನಿಲ್ಲಿಸಲಾಗಿತ್ತು’ ಎಂದು ಜಿಲ್ಲಾಧಿಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬಿಹಾರದ ವಿವಿಧ ಕಡೆ 15 ಸೇತುವೆ ಕುಸಿತ ಪ್ರಕರಣಗಳು ನಡೆದಿದ್ದವು. ಹೀಗಾಗಿ ರಾಜ್ಯದ ಎಲ್ಲಾ ಸೇತುವೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ರಿಪೇರಿ ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಚಿಸಿದ್ದರು.
ನನ್ನ ಫೋನ್ ಹ್ಯಾಕ್ ಆಗಿದೆ: ಸಂಸದೆ ಸುಪ್ರಿಯಾ ಸುಳೆ ದೂರು
ಪುಣೆ: ತಮ್ಮ ಪೋನ್ ಮತ್ತು ವಾಟ್ಸ್‌ಪ್ ಹ್ಯಾಕ್ ಆಗಿರುವುದಾಗಿ ಎನ್‌ಸಿಪಿ (ಶರದ್ ಬಣ) ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.ಈ ಬಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿರುವ ಅವರು, ‘ನನಗೆ ಸಂದೇಶ ಅಥವ ಕರೆ ಮಾಡಬೇಡಿ. ಫೋನ್ ಹ್ಯಾಕ್ ಆಗಿರುವ ಕುರಿತು ದೂರು ನೀಡಲಿದ್ದೇನೆ’ ಎಂದಿದ್ದಾರೆ.ಮೂಲಗಳ ಪ್ರಕಾರ ಆನ್‌ಲೈನ್ ಮೂಲಕ ಈಗಾಗಲೇ ದೂರು ದಾಖಲಿಸಲಾಗಿದೆ.ಇತ್ತೀಚೆಗೆ ವಿಪಕ್ಷ ಸಂಸದರಾದ ಮಹುವಾ ಮೊಯಿತ್ರಾ, ಶಶಿ ತರೂರ್, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವರು ತಮ್ಮ ಐಫೋನ್ ಹ್ಯಾಕ್ ಮಾಡಲಾಗುತ್ತಿದೆ ಎಂದು ದೂರಿದ್ದರು.
ಉತ್ತರ ಭಾರತದಲ್ಲಿ ಮಳೆಯ ಆರ್ಭಟ: 28 ಸಾವು
ನವದೆಹಲಿ: ಭಾರತದ ಉತ್ತರ ಮತ್ತು ವಾಯವ್ಯ ಭಾಗಗಳಲ್ಲಿ ಭಾನುವಾರ ಸುರಿದ ಭಾರೀ ಮಳೆ ಭೂಕುಸಿತ, ಜನವಸತಿ ನಾಶ ಹಾಗೂ ಅಣೆಕಟ್ಟಿನಲ್ಲಿ ಬಿರುಕಿನಂತಹ ಅನಾಹುತಕ್ಕೆ ಕಾರಣವಾಗಿದ್ದು, 28 ಜನರನ್ನು ಬಲಿ ಪಡೆದಿದೆ.ರಾಜಸ್ಥಾನದಲ್ಲಿ ಎರಡು ದಿನ ಬಿಡದೆ ಸುರಿದ ಮಳೆಗೆ 16 ಜನ ಸಾವನ್ನಪ್ಪಿದ್ದಾರೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ವಾಹನವೊಂದು ಮಳೆನೀರಲ್ಲಿ ಕೊಚ್ಚಿಹೋದ ಪರಿಣಾಮ ಒಂದೇ ಕುಟುಂಬದ 8 ಜನ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.ದೆಹಲಿಯ ಹಲವು ಭಾಗಗಳಲ್ಲಿ ರಸ್ತೆಗಳಲ್ಲಿ ನಿಂತ ನೀರು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿತ್ತು.ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಆಡಳಿತ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ.
ಉಗ್ರರು, ಸೈನಿಕರು ಪರಸ್ಪರ ಶಾಮೀಲು: ಫಾರೂಖ್ ವಿವಾದಿತ ಹೇಳಿಕೆ
ಶ್ರೀನಗರ: ಭಾರತೀಯ ಸೇನಾ ಪಡೆಗಳು ಮತ್ತು ಉಗ್ರರು ಪರಸ್ಪರ ಶಾಮೀಲಾಗಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಖ್ ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ.ಕಾಶ್ಮೀರದಲ್ಲಿನ ಉಗ್ರರ ದಾಳಿ ಬಗ್ಗೆ ಭಾನುವಾರ ಅವರು ಮಾತನಾಡಿ, ‘ನಮ್ಮ ಗಡಿಗಳಲ್ಲಿ ಬೃಹತ್ ಸೈನಿಕ ನಿಯೋಜನೆ ಇದೆ, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಸೇನೆಯ ಭಾರಿ ಉಪಸ್ಥಿತಿಯ ಹೊರತಾಗಿಯೂ, ಉಗ್ರರು ಭಾರತೀಯ ಭೂಪ್ರದೇಶದೊಳಗೆ ನುಸುಳುತ್ತಿದ್ದಾರೆ. ಯೇ ಸಬ್ ಮಿಲೇ ಹುಯೇ ಹೈ ... ಹಮಾರಿ ಬರ್ಬಾದಿ ಕೆ ಲಿಯೇ... (ನಮ್ಮನ್ನು ಹಾಳು ಮಾಡಲು ಸೈನಿಕರ ಮತ್ತು ಉಗ್ರರ ನಡುವೆ ಒಪ್ಪಂದವಿದೆ)’ ಎಂದರು.