ಸಾರಾಂಶ
ಸೂರತ್: ಇತ್ತೀಚೆಗೆ ಉತ್ತರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಸಾಲು ಸಾಲು ಪ್ರಕರಣಗಳ ಬೆನ್ನಲ್ಲೇ ಗುಜರಾತಿನಲ್ಲಿ ಇದೀಗ ಅಂತಹದ್ದೇ ಘಟನೆ ನಡೆದಿದೆ.
ಗುಜರಾತಿನ ಸೂರತ್‌ನ ಕಿಮ್ ರೈಲ್ವೆ ಸ್ಟೇಷನ್ ಸಮೀಪದ ಟ್ರ್ಯಾಕ್ ಮೇಲೆ ರೈಲು ಹಳಿಗಳನ್ನು ಪರಸ್ಪರ ಜೋಡಿಸುವ ಇರುವ ಫಿಶ್ ಪ್ಲೇಟ್ (ಕಬ್ಬಿಣದ ತುಂಡುಗಳು) ಕೀಗಳನ್ನು ತೆಗೆದು ರೈಲು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಆ ಮಾರ್ಗದಲ್ಲಿ ರೈಲು ಸಾಗುವ ಮೊದಲೇ ದುಷ್ಕೃತ್ಯ ಪತ್ತೆಯಾದ ಕಾರಣ ಅನಾಹುತ ತಪ್ಪಿದೆ.
==
42 ದಿನದ ಬಳಿಕ ಮುಷ್ಕರಕ್ಕೆ ಭಾಗಶಃ ಬ್ರೇಕ್: ಕೆಲಸಕ್ಕೆ ಮರಳಿದ ಬಂಗಾಳಿ ವೈದ್ಯರು
ಕೋಲ್ಕತಾ: ಆರ್‌ಜಿ ಕರ್ ಕಾಲೇಜಿನಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಖಂಡಿಸಿ ನಡೆಯುತ್ತಿದ್ದ ವೈದ್ಯರ ಮುಷ್ಕರಕ್ಕೆ ಭಾಗಶಃ ಬ್ರೇಕ್ ಬಿದ್ದಿದ್ದು, 42 ದಿನಗಳ ಬಳಿಕ ಕಿರಿಯ ವೈದ್ಯರು ಶನಿವಾರ ಕರ್ತವ್ಯಕ್ಕೆ ಮರಳಿದ್ದಾರೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ತುರ್ತು ವಿಭಾಗದ ವೈದ್ಯರು ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಹೊರರೋಗಿಗಳ ವಿಭಾಗ ಇದಕ್ಕೆ ಹೊರತಾಗಿದೆ. ಕಳೆದ ಒಂದು ತಿಂಗಳಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದ ರೋಗಿಗಳು ವೈದ್ಯರ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ರಾಜ್ಯ ಆರೋಗ್ಯ ಕಾರ್ಯದರ್ಶಿಯನ್ನು ವಜಾಗೊಳಿಸುವುದು ಸೇರಿದಂತೆ ತಮ್ಮೆಲ್ಲಾ ಬೇಡಿಕೆಗಳು ಇಡೇರಿಸಲು ಸರ್ಕಾರಕ್ಕೆ 7 ದಿನಗಳ ಕಾಲಾವಕಾಶ ನೀಡಿರುವ ವೈದ್ಯರು, ಅಂತೆ ಆಗದಿದ್ದಲ್ಲಿ ಮತ್ತೆ ಮುಷ್ಕರ ಪ್ರಾರಂಭಿಸುವುದಾಗಿ ಎಚ್ಚರಿಸಿದ್ದಾರೆ.
==
ದರ ಏರಿಕೆ ಬಳಿಕ ಜಿಯೋ, ಏರ್‌ಟೆಲ್, ವಿಐ ಗ್ರಾಹಕರು ಇಳಿಕೆ, ಬಿಎಸ್ಸೆನ್ಸೆಲ್ ಏರಿಕೆ
ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜುಲೈನಲ್ಲಿ ಬೆಲೆ ಏರಿಕೆ ಬಳಿಕ ಜಿಯೋ ಜಿಯೋ 7.5 ಲಕ್ಷ, ಏರ್‌ಟೆಲ್ 10.6 ಲಕ್ಷ ಮತ್ತು ವೊಡಾಫೋನ್ ಐಡಿಯಾ (ವೀ) 10.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇದೇ ವೇಳೆ ಬಿಎಸ್‌ಎನ್‌ಎಲ್ ಮಾತ್ರ 20.9 ಲಕ್ಷ ಹೊಸ ಗ್ರಾಹಕರನ್ನು ಆಕರ್ಷಿಸಿದೆ. ಮತ್ತೊಂದೆಡೆ ಮಾರುಕಟ್ಟೆ ಪಾಲಿನಲ್ಲಿ ಜಿಯೋ ಪಾಲು ಶೇ.40.71ರಿಂದ ಶೇ.40.68ಕ್ಕೆ, ಏರ್ಟೆಲ್ ಶೇ.33.23ನಿಂದ ಶೇ.33.12 ಮತ್ತು ವೊಡಾಫೋನ್ ಪಾಲು ಶೇ.18.56ನಿಂದ ಶೇ.18.46ಕ್ಕೆ ಕುಸಿತವಾಗಿದೆ.
==
ಕೆಲಸದ ಒತ್ತಡಕ್ಕೆ ಬಲಿಯಾದ ಅನಾ ಪೋಷಕರ ಜೊತೆ ರಾಗಾ ಚರ್ಚೆ: ನೆರವು
ನವದೆಹಲಿ: ಕೆಲಸದ ಒತ್ತಡದಿಂದ ಸಾವನ್ನಪ್ಪಿದ ಯಂಗ್ ಆ್ಯಂಡ್ ಅರ್ನೆಸ್ಟ್ ಕಂಪನಿಯ ಉದ್ಯೋಗಿ ಅನ್ನಾ ಸೆಬಾಸ್ಟಿನ್ ಅವರ ಪೋಷಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ವೇಳೆ ದೇಶದಲ್ಲಿ ಕರ್ತವ್ಯದ ಸ್ಥಳದಲ್ಲಿನ ಪರಿಸ್ಥಿತಿ ನಿರ್ಮಾಣಕ್ಕಾಗಿ ಅವರೊಂದಿಗೆ ಹೋರಾಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ಅನ್ನಾಳ ಅಗಲಿಕೆಗೆ ಸಂತಾಪ ಸೂಚಿಸಿದ ರಾಹುಉಲ್, ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಭಾರತದ ಲಕ್ಷಾಂತರ ಉದ್ಯೋಗಿಗಳ ಪರವಾಗಿ ಕರ್ತವ್ಯಪರ ಪರಿಸ್ಥಿತಿ ನಿರ್ಮಾಣದ ಬಗ್ಗೆ ಮಾತನಾಡಿದ್ದ ಪೋಷಕರನ್ನು ಶ್ಲಾಘಿಸಿದರು.
==
ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಗೆ 3 ಮುಸ್ಲಿಂ ಸಂಘಟನೆಗಳ ಬೆಂಬಲ
ನವದೆಹಲಿ: ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆಗೆ 3 ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮಸೂದೆಯ ಪರಿಶೀಲನೆಗೆ ನೇಮಿಸಲಾದ ಜಂಟಿ ಸಂಸದೀಯ ಸಮಿತಿ ಸಭೆಯ ಎರಡನೆ ದಿನ ಅಜ್ಮೇರ್ ಮೂಲದ ಅಖಿಲ ಭಾರತ ಸಜ್ಜಾದ ನಾಶಿನ್ ಕೌನ್ಸಿಲ್(ಎಐಎಸ್‌ಎಸ್‌ಸಿ), ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ಭಾರತ್ ಫಸ್ಟ್ ಸಂಘಟನೆಗಳು ಬೆಂಬಲಿಸಿದ್ದು, ಮಸೂದೆಯಲ್ಲಿ ಕೆಲ ಬದಲಾವಣೆಗಳನ್ನು ಸೂಚಿಸಿವೆ. ಈ ವೇಳೆ ವಕ್ಫ್ ಬೋರ್ಡ್‌ನಲ್ಲಿ ದರ್ಗಾಗಳಿಗೆ ಸೂಕ್ತ ಪ್ರತಿನಿಧ್ಯ ದೊರಕುತ್ತಿಲ್ಲ ಎಂದು ಆಪಾದಿಸಿದ ಎಐಎಸ್‌ಎಸ್‌ಸಿ, ದರ್ಗಾಗಳಿಗಾಗಿ ಪ್ರತ್ಯೇಕ ಬೋರ್ಡ್ ರಚಿಸಲು ಆಗ್ರಹಿಸಿದೆ.