ಸಾರಾಂಶ
ನವದೆಹಲಿ: ಸೇತುವೆ, ಸುರಂಗ, ಮೇಲ್ಸೇತುವೆ ಅಥವಾ ಎತ್ತರದ ಹೆದ್ದಾರಿಗಳಂತಹ ವಿಶೇಷ ರಚನೆಗಳನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವನ್ನು ಶೇ.50ರವರೆಗೆ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಾಣಿಜ್ಯ ವಾಹನ ಮಾಲೀಕರಿಗೆ ಪ್ರಯೋಜನ ನೀಡಲಿದೆ.
ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿಗಳ ಇಂಥ ವಿಶೇಷ ಭಾಗಗಳಿಗೆ ಟೋಲ್ ದರ ಸಾಮಾನ್ಯ ಟೋಲ್‌ಗಿಂತ 10 ಪಟ್ಟು ಹೆಚ್ಚಾಗಿದೆ. ಮಂಗಳವಾರ ಬಿಡುಗಡೆಯಾದ ಪರಿಷ್ಕೃತ ಅಧಿಸೂಚನೆಯಲ್ಲಿ, ಇಂಥ ವಿಭಾಗಗಳ ಶುಲ್ಕವನ್ನು ಲೆಕ್ಕಹಾಕಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಸೂತ್ರವನ್ನು ರೂಪಿಸಿದೆ.
‘ಹೊಸ ನಿಯಮವು ವಾಣಿಜ್ಯ ವಾಹನಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದುವರೆಗೆ ಖಾಸಗಿ ವಾಹನ ಮಾಲೀಕರು ಪಾವತಿಸುವುದಕ್ಕಿಂತ 4ರಿಂದ 5 ಪಟ್ಟು ಹೆಚ್ಚು ಶುಲ್ಕವನ್ನು ವಾಣಿಜ್ಯ ವಾಹನಗಳಿಗೆ ವಿಧಿಸಲಾಗುತ್ತಿತ್ತು. ಹೊಸ ನಿಯಮವು, ಈಗಾಗಲೇ ಇರುವ ಟೋಲ್ ಪ್ಲಾಜಾಗಳಿಗೆ ಮುಂದಿನ ಪರಿಷ್ಕರಣೆ ದಿನಾಂಕದಿಂದ ಜಾರಿಗೆ ಬರಲಿದೆ. ಹೊಸ ಟೋಲ್ ಪ್ಲಾಜಾಗಳಿಗೆ, ಇದು ಕಾರ್ಯಾಚರಣೆಯ ಪ್ರಾರಂಭವಾದ ದಿನಾಂಕದಿಂದ ಅನ್ವಯಿಸುತ್ತದೆ. ರಿಯಾಯಿತಿದಾರರ ನಿರ್ವಹಣೆಯ ಶುಲ್ಕ ಪ್ಲಾಜಾಗಳಿಗೆ, ರಿಯಾಯಿತಿ ಒಪ್ಪಂದಗಳ ಅವಧಿ ಮುಗಿದ ನಂತರ ಇದು ಜಾರಿಗೆ ಬರುತ್ತದೆ’ ಎಂದು ಸಚಿವಾಲಯ ತಿಳಿಸಿದೆ.