ಹೆಜಮಾಡಿ ಗ್ರಾಮ ಪಂಚಾಯಿತಿ-ಟೋಲ್ ಗೇಟ್ ಜಟಾಪಟಿ

| Published : Jul 04 2025, 11:48 PM IST

ಸಾರಾಂಶ

ಒಳ ರಸ್ತೆಯಲ್ಲಿ ಟೋಲ್‌ ಬಗ್ಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಮತ್ತು ಟೋಲ್ ನವರ ಮಧ್ಯೆ ನಡೆದ ವಿವಾದ ತಾರಕಕ್ಕೇರಿದೆ. ಗುರುವಾರ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತಿ ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ರಾಷ್ಟ್ರೀಯ ಹೆದ್ದಾರಿಯಿಂದ ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್‌ ಬಗ್ಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಮತ್ತು ಟೋಲ್ ನವರ ಮಧ್ಯೆ ನಡೆದ ವಿವಾದ ತಾರಕಕ್ಕೇರಿದೆ. ಗುರುವಾರ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತಿ ಜಪ್ತಿ ಮಾಡಿದೆ.

ಹೆಜಮಾಡಿ ಟೋಲ್ ಪ್ಲಾಜಾವನ್ನು ಗುತ್ತಿಗೆ ಪಡೆದ ಕೆಕೆಆರ್ ಕಂಪನಿ ಸ್ಥಳೀಯರನ್ನು ಕಡೆಗಣನೆ ಮಾಡುತ್ತಿದ್ದು, ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವ ಕಾರಣ ಸೋಮವಾರ ಹೆಜಮಾಡಿ ಗ್ರಾಮ ಪಂಚಾಯಿತಿ ಆಡಳಿತ ತೀವ್ರ ಪ್ರತಿಭಟನೆ ನಡೆಸಿತು. ಒಳ ರಸ್ತೆಯಲ್ಲಿ ಹೆಜಮಾಡಿಯ ಟೋಲ್ ಗೇಟ್ ಬಳಿಯ ಖಾಸಗಿ ಜಾಗದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನ ಸವಾರರಿಗೆ ಅವಕಾಶ ಮಾಡಿ ಕೊಟ್ಟಿತ್ತು. ಇದರಿಂದ ನೂರಾರು ವಾಹನಗಳು ಟೋಲ್ ಭರಿಸದೆ ಈ ರಸ್ತೆಯಲ್ಲಿ ಸಂಚರಿಸಿವೆ. ಈ ಪ್ರಕರಣ ಜಿಲ್ಲಾಧಿಕಾರಿ ಬಳಿ ತೆರಳಿದ್ದು, ಮೇಲಾಧಿಕಾರಿ ಆದೇಶ ಬರುವ ತನಕ ಯಥಾಸ್ಥಿತಿ ಕಾಪಾಡುವಂತೆ ಇತ್ತಂಡಗಳಿಗೂ ಅವರು ಸಲಹೆ ನೀಡಿದ್ದಾರೆ. ಗುರುವಾರ ಬೆಳಗ್ಗೆ ಹೆಜಮಾಡಿ ಟೋಲ್ ಪ್ಲಾಜಾದ ಅಧಿಕಾರಿ ತಿಮ್ಮಯ್ಯ ಘಟನಾ ಸ್ಥಳಕ್ಕೆ ಆಗಮಿಸಿದರು. ಪಂಚಾಯಿತಿ ರಸ್ತೆ ನಿರ್ಮಾಣ ಮಾಡಿದ ಜಾಗದಲ್ಲಿ ಸಿಮೆಂಟು ಕಲ್ಲು ದಂಡೆ ಹಾಗೂ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ಶಾಶ್ವತ ರಸ್ತೆ ಸಂಚಾರ ಮಾಡದಂತೆ ಪ್ರಯತ್ನ ಪಟ್ಟಿದ್ದಾರೆ. ಮಾಹಿತಿ ತಿಳಿದ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಘಟನಾ ಸ್ಥಳಕ್ಕೆ ಆಗಮಿಸಿ, ಯಾವುದೇ ಕಾಮಗಾರಿ ಮಾಡದಂತೆ ತಡೆದಿದ್ದು ಟೋಲ್ ಗೇಟ್ ಸಿಬ್ಬಂದಿ ಶಾಶ್ವತ ರಸ್ತೆ ತಡೆಗಾಗಿ ತಂದಿದ್ದ ಸೊತ್ತುಗಳನ್ನು ಜಪ್ತಿ ಮಾಡಿ ಗ್ರಾ.ಪಂ.ಗೆ ಸಾಗಿಸಿದ್ದಾರೆ.ಗ್ರಾ.ಪಂ. ಮತ್ತು ಟೋಲ್ ಅಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆದು ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು, ಜಿಲ್ಲಾಧಿಕಾರಿ ಆದೇಶದಂತೆ ಯಥಾಸ್ಥಿತಿ ಕಾಪಾಡುವಂತೆ ಇತ್ತಂಡಗಳಿಗೆ ತಾಕೀತು ಮಾಡಿದರು.