ಸಾರಾಂಶ
ತಿರುವನಂತಪುರ: ಇಲ್ಲಿಯ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲಸಂತಿಯಾಗಿ (ಪ್ರಧಾನ ಅರ್ಚಕ) ಎಸ್.ಅರುಣ್ ಕುಮಾರ್ ನಂಬೂದರಿ ಅವರನ್ನು ಆಯ್ಕೆ ಮಾಡಲಾಗಿದೆ. ದೇವಾಲಯಕ್ಕೆ ವಾರ್ಷಿಕ ಯಾತ್ರೆಯ ಋತು ಆರಂಭದ ವಾರಗಳ ಮುನ್ನ ಈ ಆಯ್ಕೆ ನಡೆದಿದೆ. ಮಾಸಿಕ ಪೂಜೆ ನಿಮಿತ್ತ ಬುಧವಾರ ತೆರೆದ ದೇಗುಲದಲ್ಲಿ ಪ್ರಾಥಃ ಪೂಜೆ ಬಳಿಕ ಸಾಂಪ್ರದಾಯಿಕ ಚೀಟಿ ತೆಗೆಯುವ ವಿಧಾನದ ಮೂಲಕ ಆರಿಸಲಾಗಿದೆ. 25 ಅರ್ಹ ಅರ್ಚಕರ ಪಟ್ಟಿಯಲ್ಲಿ ಅರುಣ್‌ಕುಮಾರ್ ಆಯ್ಕೆಯಾಗಿದ್ದಾರೆ.
ಸೆನ್ಸೆಕ್ಸ್ 495 ಅಂಕ ಇಳಿದು 81006ರಲ್ಲಿ ಅಂತ್ಯ: 6 ಲಕ್ಷ ಕೋಟಿ ಹೂಡಿಕೆ ನಷ್ಟ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 495 ಅಂಕ ಇಳಿದು 81006 ಅಂಕಗಳಲ್ಲಿ ಮುಕ್ತಾಯವಾಗಿದೆ. ಮತ್ತೊಂದೆಡೆ ನಿಫ್ಟಿ ಕೂಡಾ 221 ಅಂಕ ಕುಸಿದು 24749 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದರೊಂದಿಗೆ ಎರಡೂ ಸೂಚ್ಯಂಕಗಳು ಎರಡು ತಿಂಗಳ ಕನಿಷ್ಠಕ್ಕೆ ತಲುಪಿದಂತೆ ಆಗಿದೆ. ಬ್ಯಾಂಕಿಂಗ್, ಆಟೋ ರಿಯಾಲಿಟಿ ವಲಯದ ಷೇರುಗಳಲ್ಲಿ ಕಂಡುಬಂದ ಭಾರೀ ಮಾರಾಟ ಸೂಚ್ಯಂಕವನ್ನು ಭಾರೀ ಕುಸಿತ ಕಾಣುವಂತೆ ಮಾಡಿತು. ಗುರುವಾರ ಷೇರುಪೇಟೆಯಲ್ಲಿ ಕಂಡುಬಂದ ಭಾರೀ ಕುಸಿತದ ಪರಿಣಾಮ ಒಂದೇ ದಿನ ಹೂಡಿಕೆದಾರರ ಸಂಪತ್ತು 6 ಲಕ್ಷ ಕೋಟಿ ರು.ನಷ್ಟು ಕರಗಿ ಹೋಯಿತು.
ಆತ್ಮರಕ್ಷಣೆಗಾಗಿ ಬಡಿಗೆಯಲ್ಲೇ ಚಿರತೆಯ ಕೊಂದ 60ರ ರೈತ
ಬಿಜ್ನೋರ್: ತನ್ನನ್ನು ಕೊಲ್ಲಲು ಬಂದ ಚಿರತೆಯನ್ನು ರೈತನೊಬ್ಬ ಕೇವಲ ಬಡಿಗೆ ಹಿಡಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ. ಬಿಕ್ಕವಾಲಾ ಹಳ್ಳಿಯ 60 ವರ್ಷದ ತೆಗ್ವೀರ್ ಸಿಂಗ್ ಎಂಬ ರೈತ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೇ ಬಂದ ಚಿರತೆಯೊಂದು ಆತನ ಮೇಲೆ ಎರಗಿ, ಆತನನ್ನು ಸಮೀಪದ ಪೊದೆಯತ್ತ ಎಳೆಯಲು ಪ್ರಯತ್ನಿಸಿದೆ. ಈ ವೇಳೆ ಚಿರತೆಯಿಂದ ತಪ್ಪಿಸಿಕೊಳ್ಳಲು ಭಾರೀ ಪ್ರಯತ್ನ ನಡೆಸಿದ ಸಿಂಗ್, ಕೊನೆಗೆ ದೊಣ್ಣೆಯಿಂದ ಚಿರತೆ ತಲೆಗೆ ಬಲವಾದ ಏಟು ನೀಡಿದ್ದಾನೆ. ಈ ಏಟಿಗೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ರೈತ ಬಚಾವ್ ಆಗಿದ್ದಾನೆ. ಘಟನೆಯಲ್ಲಿ ಸಿಂಗ್‌ಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕ್ ಜಿಂದಾಬಾದ್ ಎಂದ ವ್ಯಕ್ತಿ ಬೇಲ್‌ಗೆ ರಾಷ್ಟ್ರಧ್ವಜಕ್ಕೆ 21 ಸೆಲ್ಯೂಟ್‌ನ ಷರತ್ತು!
ಭೋಪಾಲ್: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ತಿಂಗಳಿಗೆ 2 ಬಾರಿ ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಮಾಡಬೇಕು. ಆ ವೇಳೆ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ. ಫೈಜಾನ್ ಎಂಬ ಆರೋಪಿ ಕಳೆದ ಮೇ.17 ರಂದು ಭೋಪಾಲ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.