ದೆಹಲಿಯ ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ವಿಚಾರಣಾ ಸಮನ್ಸ್‌ಗೆ ಅರವಿಂದ್ ಕೇಜ್ರಿವಾಲ್ ಸತತ ಏಳನೇ ಬಾರಿಗೆ ಗೈರಾಗಿದ್ದು, ಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಇಡಿಗೆ ಪತ್ರ ಬರೆದಿದ್ದಾರೆ.
ನವದೆಹಲಿ: ದಿಲ್ಲಿ ಮದ್ಯ ಲೈಸೆನ್ಸ್ ಹಂಚಿಕೆ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಜಾರಿ ನಿರ್ದೇಶನಾಲಯಕ್ಕೆ ಸಡ್ಡು ಹೊಡೆದಿದ್ದಾರೆ.
ಸೋಮವಾರ ವಿಚಾರಣೆಗೆ ಬರುವಂತೆ ಇ.ಡಿ. ನೀಡಿದ್ದ ಸಮನ್ಸ್ ತಿರಸ್ಕರಿಸಿರುವ ಕೇಜ್ರಿ, ಸತತ 7ನೇ ವಿಚಾರಣೆಗೂ ಗೈರಾಗಿದ್ದಾರೆ.ಜೊತೆಗೆ ವಿಚಾರಣೆ ವಿಷಯ ಹಾಲಿ ಕೋರ್ಟ್‌ನಲ್ಲಿದ್ದು ಅದರ ತೀರ್ಪು ಬರುವವರೆಗೂ ಕಾಯುವಂತೆ ಇ.ಡಿ.ಗೆ ಸಲಹೆ ನೀಡಿದ್ದಾರೆ.
ಅಲ್ಲದೆ ಸಮನ್ಸ್ ನೀಡಿದ್ದು ಆಮ್‌ಆದ್ಮಿ ಪಕ್ಷ ಇಂಡಿಯಾ ಮೈತ್ರಿಕೂಟ ತೊರೆಯಬೇಕು ಎಂದು ಬೆದರಿಸಲು ಎಂದೂ ಆರೋಪಿಸಿರುವ ಪಕ್ಷ, ಯಾವುದೇ ಕಾರಣಕ್ಕೂ ಮೈತ್ರಿ ಕೂಡಾ ತೊರೆಯುವುದಿಲ್ಲ ಎಂದು ಹೇಳಿದೆ.ವಿಚಾರಣೆಗೆ ಕೇಜ್ರಿ ಖುದ್ದು ಹಾಜರಿಗೆ ಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು. ಆದರೆ ಗೈರು ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಅರ್ಜಿ ಕುರಿತು ಅದಿನ್ನೂ ತೀರ್ಪು ನೀಡಿಲ್ಲ.