ಸಾರಾಂಶ
ಮುಂಬೈ: ಜಾಗತಿಕ ಆರ್ಥಿಕ ಏರಿಳಿತಗಳ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನ ಸಂಗ್ರಹ ಪ್ರಮಾಣವನ್ನು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಜನವರಿ ತಿಂಗಳೊಂದರಲ್ಲೇ ಆರ್‌ಬಿಐ ಭರ್ಜರಿ 8.7 ಟನ್‌ನಷ್ಟು ಚಿನ್ನ ಖರೀದಿ ಮಾಡಿರುವುದು ಆರ್‌ಬಿಐ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಇದರ ಅಂದಾಜು ಮೊತ್ತ ಸುಮಾರು 5600 ಕೋಟಿ ರು.ಗಳಾಗಲಿದೆ.
ಈ ಖರೀದಿಯೊಂದಿಗೆ ಆರ್‌ಬಿಐನ ಸಂಗ್ರಹದಲ್ಲಿರುವ ಒಟ್ಟು ಚಿನ್ನ ಮೀಸಲಿನ ಪ್ರಮಾಣ 812 ಟನ್‌ಗೆ ಏರಿಕೆಯಾಗಿದೆ. ಶುಕ್ರವಾರ ದ್ವೈಮಾಸಿಕ ಸಾಲ ನೀತಿ ಪ್ರಕಟದ ವೇಳೆ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ನಮ್ಮ ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಳದ ನಿಟ್ಟಿನಲ್ಲಿ ನಾವು ಚಿನ್ನ ಸಂಗ್ರಹ ಹೆಚ್ಚಳ ಮಾಡುತ್ತಿದ್ದೇವೆ ಎಂದು ಹೇಳಿದರು. ಅವರು ಖರೀದಿ ಮತ್ತು ಒಟ್ಟು ಸಂಗ್ರಹದ ಪ್ರಮಾಣದ ಬಗ್ಗೆ ಮಾಹಿತಿ ನೀಡಲಿಲ್ಲವಾದರೂ, 2023ರ ಮಾರ್ಚ್ ಅಂತ್ಯಕ್ಕೆ ಆರ್‌ಬಿಐ ಇದ್ದ ಚಿನ್ನ ಮೀಸಲು ಮತ್ತು 2024 ಮಾರ್ಚ್ ಅಂತ್ಯಕ್ಕೆ ಇದ್ದ ಮೀಸಲು ಪರಿಶೀಲಿಸಿದಾಗ ಅದರಲ್ಲಿ ಆರ್‌ಬಿಐ ಬಳಿ ಹಾಲಿಲ 812 ಟನ್ ಚಿನ್ನ ಸಂಗ್ರಹ ಬೆಳಕಿಗೆ ಬಂದಿದೆ.
ಯಾವುದೇ ದೇಶವೊಂದರ ಬಳಿ ಇರುವ ಪ್ರಮುಖ ವಿದೇಶಿ ಕರೆನ್ಸಿಗಳಾದ ಅಮೆರಿಕದ ಡಾಲರ್, ಯುರೋ, ಚಿನ್ನದ ಸಂಗ್ರಹವು ಆ ದೇಶದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ. ಹೀಗಾಗಿಯೇ ಬಹುತೇಕ ದೇಶಗಳು ಇವುಗಳನ್ನು ಸಾಕಷ್ಟು ಸಂಗ್ರಹ ಮಾಡಿಕೊಳ್ಳುತ್ತವೆ.