ಇಲ್ಲಿ ನಡೆಯುತ್ತಿರುವ ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದಾರೆ. ಮೊದಲ ದಿನವೇ ಟೂರ್ನಿಯಲ್ಲಿ ಭಾರತೀಯರ ಸವಾಲು ಮುಕ್ತಾಯಗೊಂಡಿದೆ.

ಸಿಡ್ನಿ: ಭಾರತದ ತಾರಾ ಆಲ್ರೌಂಡರ್‌ ಆರ್‌.ಅಶ್ವಿನ್‌ ಮುಂದಿನ ಆವೃತ್ತಿಯ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್‌ ತಂಡದ ಪರ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗಷ್ಟೇ ಐಪಿಎಲ್‌ ಹಾಗೂ ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಅಶ್ವಿನ್‌, ವಿದೇಶಿ ಲೀಗ್‌ಗಳಲ್ಲಿ ಆಡಲು ಅರ್ಹರಾಗಿದ್ದಾರೆ. ಅಶ್ವಿನ್‌ ಯುಎಇನಲ್ಲಿ ನಡೆಯಲಿರುವ ಐಎಲ್‌ಟಿ20 ಟೂರ್ನಿಯಲ್ಲೂ ಆಡುವ ಸಾಧ್ಯತೆ ಇದ್ದು, 2026ರ ಜ.4ರಂದು ಐಎಲ್‌ಟಿ20 ಮುಗಿದ ಬಳಿಕ ಬಿಬಿಎಲ್‌ನಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಬಿಬಿಎಲ್‌ ಡಿ.14ರಿಂದ ಜ.18ರ ವರೆಗೂ ನಡೆಯಲಿದೆ.

ಕೊರಿಯಾ ಮಾಸ್ಟರ್ಸ್‌:

ಭಾರತದ ಸವಾಲು ಅಂತ್ಯ

ಸುವೊನ್‌: ಇಲ್ಲಿ ನಡೆಯುತ್ತಿರುವ ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದಾರೆ. ಮೊದಲ ದಿನವೇ ಟೂರ್ನಿಯಲ್ಲಿ ಭಾರತೀಯರ ಸವಾಲು ಮುಕ್ತಾಯಗೊಂಡಿದೆ. ಕನ್ನಡಿಗ ಆಯುಶ್‌ ಶೆಟ್ಟಿ, ಕಿರಣ್‌ ಜಾರ್ಜ್‌, ಅನುಪಮಾ ಉಪಾಧ್ಯಾಯ, ಮೋಹಿತ್‌-ಲಕ್ಷಿತಾ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದರೆ, ಎಚ್‌.ಎಸ್‌.ಪ್ರಣಯ್‌ ಗಾಯಗೊಂಡು ಪಂದ್ಯದಿಂದ ನಿವೃತ್ತಿ ಪಡೆದರು. ಈ ವರ್ಷ ಬಿಡಬ್ಲ್ಯುಎಫ್‌ ಟೂರ್ನಿಯೊಂದರಲ್ಲಿ ಚಾಂಪಿಯನ್‌ ಆಗಿರುವ ಏಕೈಕ ಭಾರತ ಎನಿಸಿರುವ ಆಯುಷ್‌ ಚೈನೀಸ್‌ ತೈಪೆಯ ಸು ಲಿ ಯಾಂಗ್‌ ವಿರುದ್ಧ 18-21, 18-21 ಗೇಮ್‌ಗಳಲ್ಲಿ ಸೋಲುಂಡರು. ಆಯುಷ್‌ ಇತ್ತೀಚೆಗೆ ಯುಎಸ್‌ ಓಪನ್‌ ಸೂಪರ್‌ 300 ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು.

ಅಂಡರ್‌-19: ಆಸೀಸ್‌

ವಿರುದ್ಧ ಸರಣಿ ಗೆದ್ದ ಭಾರತ

ಬ್ರಿಸ್ಬೇನ್‌: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಅಂಡರ್‌-19 ತಂಡ ಯೂಥ್‌ ಒನ್‌ಡೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 51 ರನ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಗಳಿಸಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ 14 ವರ್ಷದ ವೈಭವ್‌ ಸೂರ್ಯವಂಶಿ 68 ಎಸೆತದಲ್ಲಿ 70 ರನ್‌ ಸಿಡಿಸಿದರು. ಅವರ ಇನ್ನಿಂಗ್ಸಲ್ಲಿ 5 ಬೌಂಡರಿ, 6 ಸಿಕ್ಸರ್‌ಗಳಿದ್ದವು. ಭಾರತ 49.4 ಓವರಲ್ಲಿ 300 ರನ್‌ಗೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ಜೇಡನ್‌ ಡ್ರೇಪರ್‌ (107)ರ ಶತಕದ ಹೊರತಾಗಿಯೂ 47.2 ಓವರಲ್ಲಿ 249 ರನ್‌ಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.