ಟೆಸ್ಟ್‌ ರ್‍ಯಾಂಕಿಂಗ್‌: ಆರ್‌.ಅಶ್ವಿನ್‌ ರೇಟಿಂಗ್‌ ಅಂಕ ಸಾರ್ವಕಾಲಿಕ ದಾಖಲೆ ಮುರಿದ ಬೂಮ್ರಾ

| Published : Jan 02 2025, 12:32 AM IST / Updated: Jan 02 2025, 04:07 AM IST

ಸಾರಾಂಶ

ಸಾರ್ವಕಾಲಿಕ ಅಧಿಕ ರೇಟಿಂಗ್‌ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹೆಸರಿನಲ್ಲಿದೆ. 2007ರಲ್ಲಿ ಅವರು 920 ರೇಟಿಂಗ್‌ ಅಂಕ ಗಳಿಸಿದ್ದರು. ಆ ದಾಖಲೆಯನ್ನು ಮುರಿಯುವ ಅವಕಾಶ ಬೂಮ್ರಾಗಿದೆ.

ದುಬೈ: ಐಸಿಸಿ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಆರ್‌.ಅಶ್ವಿನ್‌ರ ರೇಟಿಂಗ್‌ ಅಂಕಗಳ ದಾಖಲೆಯನ್ನು ವೇಗಿ ಜಸ್‌ಪ್ರೀತ್‌ ಬೂಮ್ರಾ ಮುರಿದಿದ್ದಾರೆ. ಕಳೆದ ವಾರ ಬೂಮ್ರಾ 904 ರೇಟಿಂಗ್‌ ಅಂಕ ಗಳಿಸಿ, ಅಶ್ವಿನ್‌ ದಾಖಲೆ ಸರಿಗಟ್ಟಿದ್ದರು. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಬೂಮ್ರಾ ರೇಟಿಂಗ್‌ ಅಂಕವನ್ನು 907ಕ್ಕೆ ಹೆಚ್ಚಿಸಿ, ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ/ ಇದು ಭಾರತೀಯ ಆಟಗಾರರ ಸಾರ್ವಕಾಲಿಕ ಶ್ರೇಷ್ಠ ರೇಟಿಂಗ್‌ ಅಂಕ. ಒಟ್ಟಾರೆ ವಿಶ್ವದ ಆಟಗಾರರ ಪಟ್ಟಿಯಲ್ಲಿ ಬೂಮ್ರಾ ಜಂಟಿ 17ನೇ ಸ್ಥಾನದಲ್ಲಿದ್ದಾರೆ.ಸಾರ್ವಕಾಲಿಕ ಅಧಿಕ ರೇಟಿಂಗ್‌ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹೆಸರಿನಲ್ಲಿದೆ. 2007ರಲ್ಲಿ ಅವರು 920 ರೇಟಿಂಗ್‌ ಅಂಕ ಗಳಿಸಿದ್ದರು. ಆ ದಾಖಲೆಯನ್ನು ಮುರಿಯುವ ಅವಕಾಶ ಬೂಮ್ರಾಗಿದೆ.

ಆಸೀಸ್‌ ಪ್ರಧಾನಿ ಜತೆ ಕ್ರಿಕೆಟಿಗರ ವರ್ಷಾಚರಣೆ

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಬುಧವಾರ ಹೊಸ ವರ್ಷವನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್‌ ಜೊತೆ ಆಚರಿಸಿದರು.ಇತ್ತಂಡಗಳು ಜ.3ರಿಂದ ಸಿಡ್ನಿಯಲ್ಲಿ 5ನೇ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಹೊಸ ವರ್ಷಾಚರಣೆ ಪ್ರಯುಕ್ತ ಇತ್ತಂಡಗಳ ಆಟಗಾರರಿಗೆ ಪ್ರಧಾನಿ ಆಲ್ಬನೀಸ್‌, ಸಿಡ್ನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದರು.

ಬೂಮ್ರಾಗೆ ಕಾನೂನು ಜಾರಿ ಮಾಡ್ತೇವೆ: ಪಿಎಂ

ಭಾರತ ಆಟಗಾರರ ಭೇಟಿ ವೇಳೆ ವೇಗಿ ಬೂಮ್ರಾ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೆ, ನಿಮಗಾಗಿ ಆಸ್ಟ್ರೇಲಿಯಾದಲ್ಲಿ ಹೊಸ ಕಾನೂನು ಜಾರಿ ಮಾಡಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ ಎಂದು ವರದಿಯಾಗಿದೆ. ‘ಬೂಮ್ರಾ ಎಡಗೈಯಿಂದ ಅಥವಾ ಒಂದು ಹೆಜ್ಜೆ ಹಿಂದಿನಿಂದ ಬೌಲ್‌ ಮಾಡುವ ಹಾಗೆ ಇಲ್ಲಿ ಕಾನೂನು ಅಂಗೀಕರಿಸಬೇಕಾಗಬಹುದು. ಅವರು ಬೌಲಿಂಗ್‌ಗೆ ಬಂದಾಗಲೆಲ್ಲಾ ಬಹಳ ರೋಮಾಂಚನ ಉಂಟಾಗುತ್ತದೆ’ ಎಂದಿದ್ದಾರೆ.