ಸಾರಾಂಶ
ನವದೆಹಲಿ: ಕಳೆದ ವರ್ಷ(2023) ಏಷ್ಯಾ ಭಾಗದಲ್ಲಿ ಅತಿಹೆಚ್ಚು ಹವಾಮಾನ ವೈಪರೀತ್ಯಗಳು ಉಂಟಾಗಿದ್ದು, ಭಾರತದಲ್ಲಿ ಬೇಸಿಗೆಯಲ್ಲಿ ವಿಪರೀತ ಉಷ್ಣಹವೆಯಿದ್ದ ಹಿನ್ನೆಲೆಯಲ್ಲಿ ಬರೋಬ್ಬರಿ 110 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಾಗತಿಕ ಹವಾಮಾನ ಸಂಸ್ಥೆಯ ವರದಿ ತಿಳಿಸಿದೆ.
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಈ ಸಾವುಗಳು ಉಂಟಾಗಿದ್ದು, ಆ ಸಮಯದಲ್ಲಿ ಪೂರ್ವ ಭಾರತವೂ ಸೇರಿದಂತೆ ಆಗ್ನೇಯ ಏಷ್ಯಾದ ಬಾಂಗ್ಲಾದೇಶ ಮತ್ತು ಚೀನಾದಲ್ಲಿ ವಿಪರೀತ ತಾಪಮಾನ ಏರಿಕೆಯಾಗಿತ್ತು ಎಂದು ಉಲ್ಲೇಖಿಸಿದೆ. ಇದರ ಜೊತೆಗೆ ಭಾರತದಲ್ಲಿ ಹರಿಯುವ ಗಂಗಾ, ಬ್ರಹ್ಮಪುತ್ರಾ ಸೇರಿದಂತೆ ಹಿಂದೂ ಕುಶ್ ಪ್ರದೇಶ, ಮ್ಯಾನ್ಮಾರ್‌ನಲ್ಲಿರುವ ಮೆಕಾಂಗ್ ನದಿಗಳು ನೀರಿಲ್ಲದೆ ವಿಪರೀತ ಕೆಳಮಟ್ಟದಲ್ಲಿ ಹರಿಯುತ್ತಿದ್ದವು ಎಂದೂ ವರದಿ ಉಲ್ಲೇಖಿಸಿದೆ.ಹೀಗೆ ನೀರಿಲ್ಲದ ಪರಿಣಾಮವಾಗಿ ಚೀನಾದಲ್ಲಿ ವರ್ಷಪೂರ್ತಿ ಮಳೆ ಕೊರತೆಯಾಗಿ ಬರಗಾಲ ಉಂಟಾಗಿದ್ದರೆ, ಭಾರತದ ಮುಂಗಾರು ಅವಧಿಯಲ್ಲಿ ಸಾಧಾರಣಕ್ಕಿಂತ ಕಡಿಮೆ ಮಟ್ಟದಲ್ಲಿ ಮಳೆ ಬಂದಿತ್ತು. ಆದಾಗ್ಯೂ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಅನಾವೃಷ್ಟಿಯಾಗಿ ಭಾರತ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ಭಾರೀ ಪ್ರವಾಹ ಬಂದ ಪರಿಣಾಮ 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದೆ. ಇದೇ ಅವಧಿಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ವಿಪರೀತ ಮಳೆ ಬಂದಿದ್ದಾಗಿಯೂ ವರದಿ ತಿಳಿಸಿದೆ.
9 ಲಕ್ಷ ಜನಕ್ಕೆ ಹಾನಿ:ಸಮಸ್ತ ಏಷ್ಯಾ ಖಂಡವನ್ನು ಗಣನೆಗೆ ತೆಗೆದುಕೊಂಡಲ್ಲಿ 2023ರಲ್ಲಿ ಜಲಸಂಬಂಧಿ 79 ಹವಾಮಾನ ವೈಪರೀತ್ಯಗಳು ಸಂಭವಿಸಿವೆ. ಇದಲ್ಲಿ ಬರೋಬ್ಬರಿ 2000 ಮಂದಿ ಸಾವನ್ನಪ್ಪಿದ್ದಾರೆ ಮತ್ತು 9 ಲಕ್ಷಕ್ಕೂ ಅಧಿಕ ಮಂದಿಯ ಆಸ್ತಿ ಪಾಸ್ತಿ ನಷ್ಟವಾಗಿದೆ. ಇದರಲ್ಲಿ ಶೇ.80ರಷ್ಟು ಪ್ರವಾಹ ಮತ್ತು ಸಿಡಿಲುಬಡಿತದಿಂದ ಉಂಟಾಗಿದೆ ಎಂದು ವರದಿ ತಿಳಿಸಿದೆ.