ಲೋಕಸಭೆ ಚುನಾವಣೆ ಬಳಿಕ ರಾಹುಲ್ ಬಂಧನ: ಹಿಮಂತ

| Published : Jan 25 2024, 02:04 AM IST / Updated: Jan 25 2024, 05:27 AM IST

Rahul Gandhi
ಲೋಕಸಭೆ ಚುನಾವಣೆ ಬಳಿಕ ರಾಹುಲ್ ಬಂಧನ: ಹಿಮಂತ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ರಾಹುಲ್‌ ಗಾಂಧಿಯನ್ನು ಬಂಧನ ಮಾಡಿದರೆ ರಾಜಕೀಯ ಪ್ರೇರಿತ ಅಂತಾರೆ. ಹೀಗಾಗಿ ಚುನಾವಣೆ ನಂತರ ರಾಹುಲ್‌ ಬಂಧನ ಮಾಡುತ್ತೇವೆ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ. ಅಸ್ಸಾಂನಲ್ಲಿ ರಾಹುಲ್‌ ವಿರುದ್ಧ ಶಾಂತಿಭಂಗ ಕೇಸಿನ ಕಾರಣ ಕ್ರಮ ಕೈಗೊಳ್ಳುವುದಾಗಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.

ಗುವಾಹಟಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಅಸ್ಸಾಂ ಶಾಂತಿ ಕದಡಲು ರಾಹುಲ್‌ ಯತ್ನಿಸಿದರು ಎಂದು ಆರೋಪಿಸಿ, ಅವರ ವಿರುದ್ಧ ಸಿಎಂ ಸೂಚನೆ ಮೇಲೆ, ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದರು.

ಇದಕ್ಕೆ ಬುಧವಾರ ಪ್ರತಿಕ್ರಿಯೆ ನೀಡಿದ ಹಿಮಂತ, ‘ನಾವು ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತೇವೆ. ರಾಹುಲ್‌ ಬಂಧನ ಆಗುವಂತೆ ನೋಡಿಕೊಳ್ಳುತ್ತೇವೆ. ಆದರೆ ಈಗಲ್ಲ. 

ಲೋಕಸಭೆ ಚುನಾವಣೆಯ ನಂತರ. ನಾವು ಈಗ ಕ್ರಮ ಕೈಗೊಂಡರೆ, ಅದು ರಾಜಕೀಯ ಪ್ರೇರಿತ ಎಂಬ ಆರೋಪ ನಮ್ಮ ಮೇಲೆ ಕೇಳಿಬರುತ್ತದೆ. ಹೀಗಾಗಿ ಈಗ ಬಂಧಿಸಲ್ಲ’ ಎಂದರು.‘ರಾಹುಲ್‌ ಯಾತ್ರೆಯ ಸಂಪೂರ್ಣ ಉದ್ದೇಶವು ಅಸ್ಸಾಂನ ಶಾಂತಿ ಕದಡುವುದು. ಆದರೆ ಇದಕ್ಕೆ ಅವಕಾಶ ನೀಡಲ್ಲ. ನಮ್ಮ ಬಳಿ ಸಾಕ್ಷ್ಯಗಳಿವೆ’ ಎಂದರು.

ಬಿ.ವಿ.ಶ್ರೀನಿವಾಸ್‌ ವಿರುದ್ಧ ಕೇಸು: ಬಂಧನ ಸಾಧ್ಯತೆ
ಭಾರತ್‌ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿದ ಹಿನ್ನೆಲೆಯಲ್ಲಿ ಗುವಾಹಟಿ ಪೊಲೀಸರು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಸೇರಿದಂತೆ ಹಲವು ನಾಯಕರ ವಿರುದ್ಧ ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 

ಯಾವುದೇ ಸಂದರ್ಭದಲ್ಲಿ ಶ್ರೀನಿವಾಸ್‌ ಸೇರಿದಂತೆ ಇತರೆ ನಾಯಕರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಹುಲ್‌ ಯಾತ್ರೆಗೆ ಮಂಗಳವಾರ ಗುವಾಹಟಿ ನಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುವಾಹಟಿ ಪ್ರವೇಶಕ್ಕೆ ಪಟ್ಟು ಹಿಡಿದು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಮುರಿದು ಒಳನುಗ್ಗಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

25 ಕೇಸು ಹಾಕಿದ್ರೂ ಹೆದರಲ್ಲ: ರಾಹುಲ್‌

ನನ್ನ ವಿರುದ್ಧ ಅಸ್ಸಾಂ ಪೊಲೀಸರು ಇನ್ನೂ 25 ಪ್ರಕರಣಗಳನ್ನು ದಾಖಲಿಸಿದರೂ ಸಹ ನಾನು ಹೆದರುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಗುಡುಗಿದ್ದಾರೆ.

ಭಾರತ್‌ ಜೊಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಬೆದರಿಸಲು ದೇಶದ ಅತಿ ಭ್ರಷ್ಟ ಮುಖ್ಯಮಂತ್ರಿ ಹಿಮಂತ ಶರ್ಮಾ ಪೊಲೀಸರಿಂದ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. 

ಅವರು ನನ್ನ ಮೇಲೆ ಇನ್ನೂ 25 ಪ್ರಕರಣಗಳನ್ನು ದಾಖಲಿಸಿದರೂ ನಾನು ಹೆದರುವುದಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನನ್ನನ್ನು ಬೆದರಿಸಲು ಪ್ರಯತ್ನಿಸುತ್ತಿದೆ. 

ನಾನು ಜನರ ಸಮಸ್ಯೆಯನ್ನು ಆಲಿಸಿ ನ್ಯಾಯ ದೊರಕಿಸಿಕೊಡಲು ಬಂದಿದ್ದು, ಈ ದೇಶದ ಜನರು ಶಾಂತಿಯನ್ನು ಬಯಸುತ್ತಿದ್ದಾರೆಯೇ ಹೊರತು ಇಲ್ಲಿನ ಮುಖ್ಯಮಂತ್ರಿಯ ರೀತಿ ದ್ವೇಷವನ್ನಲ್ಲ’ ಎಂದು ಹೇಳಿದ್ದಾರೆ.

ರಾಹುಲ್‌ಗೆ ಅಸ್ಸಾಂನಲ್ಲಿ ಝಡ್‌ ಪ್ಲಸ್‌ ಭದ್ರತೆ ಕೋರಿ ಅಮಿತ್‌ ಶಾಗೆ ಖರ್ಗೆ ಪತ್ರ

ಅಸ್ಸಾಂನಲ್ಲಿ ಭಾರತ್‌ ಜೊಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಝಡ್‌ ಪ್ಲಸ್‌ ಭದ್ರತೆ ಕೊಡುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದಾರೆ.

‘ಅಸ್ಸಾಂನಲ್ಲಿ ಯಾತ್ರೆಗೆ ಅಡ್ಡಿ ಪಡಿಸಲು ದುಷ್ಕರ್ಮಿಗಳು ಯತ್ನಿಸಿದಾಗ ಪೊಲೀಸರು ಅವರನ್ನು ತಡೆಯದೆ ದುಷ್ಕರ್ಮಿಗಳಿಗೆ ಬೆಂಬಲ ನೀಡದ್ದಿದ್ದುದು ಕಂಡು ಬಂದಿದೆ. ರಾಹುಲ್‌ ಬಸ್‌ಗೆ ಜನ ಅಡ್ಡ ಹಾಕಲೂ ಅವಕಾಶ ಮಾಡಿಕೊಡಲಾಗಿದೆ. 

ಅವರನ್ನು ಪ್ರಶ್ನಿಸಿದ ರಾಹುಲ್‌ ಗಾಂಧಿಯ ಮೇಲೆಯೇ ಪ್ರಕರಣ ದಾಖಲಿಸಲಾಗಿದೆಯೇ ಹೊರತು ದುಷ್ಕರ್ಮಿಗಳ ಕುರಿತು ಈವರೆಗೆ ಕ್ರಮ ಕೈಗೊಂಡಿಲ್ಲ. ಜೊತೆಗೆ ದುರುದ್ದೇಶಪೂರಿತವಾಗಿ ಯಾತ್ರೆಗೆ ಅಡ್ಡಿಪಡಿಸಿ ಕೆಲವೆಡೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. 

ಜೊತೆಗೆ ಜೈರಾಮ್‌ ರಮೇಶ್‌ ಅವರ ಕಾರಿನ ಮೇಲೂ ಕೆಲವರು ದಾಳಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾತ್ರೆ ಸಾಗುವವರೆಗೆ ರಾಹುಲ್‌ ಗಾಂಧಿಯೂ ಸೇರಿದಂತೆ ತಂಡದ ಎಲ್ಲ ಸದಸ್ಯರಿಗೆ ಸೂಕ್ತ ಭದ್ರತೆ ಕೊಡುವಂತೆ ನಿರ್ದೇಶಿಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.