ಪುದುಚೇರಿಯಲ್ಲಿ ಶೇ.89, ಅಸ್ಸಾಂನಲ್ಲಿ ಶೇ.85, ಕೇರಳದಲ್ಲಿ ಶೇ.77 ಮತ

ಮತದಾನ ಬಹುತೇಕ ಶಾಂತಿಯುತ । ಉತ್ಸಾಹದಿಂದ ಮತಗಟ್ಟೆಗೆ ಜನ

ಪಿಣರಾಯಿ, ಹಿಮಂತ, ಆರ್‌ಸಿ ಸೇರಿ ಪ್ರಮುಖರಿಂದ ಮತದಾನ

ಮೇ 4ಕ್ಕೆ ಹೊರ ಬೀಳಲಿದೆ ಅಭ್ಯರ್ಥಿಗಳ ಭವಿಷ್ಯ

ತಿರುವನಂತಪುರಂ/ ಗುವಾಹಟಿ/ ಪುದುಚೇರಿ: ಭಾರೀ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯ ಚುನಾವಣೆ ಪೈಕಿ ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಗುರುವಾರ ಭರ್ಜರಿ ಮತದಾನ ನಡೆದಿದೆ. ಪುದುಚೇರಿಯಲ್ಲಿ ಶೇ.89.08, ಅಸ್ಸಾಂನಲ್ಲಿ ಶೇ.85.04 ಹಾಗೂ ಕೇರಳದಲ್ಲಿ ಶೇ.77.3 ಮತದಾನವಾಗಿದೆ. ರಾಜಕೀಯ ನಾಯಕರು, ಮತದಾರರು ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.


ಮೂರು ರಾಜ್ಯಗಳಲ್ಲಿ ಸುಸೂತ್ರವಾಗಿ ಮತದಾನ ನಡೆದಿದ್ದು, ಅಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಹೆಚ್ಚಾಗಿ ಅಹಿತಕರ ಘಟನೆಗಳ ವರದಿಯಾಗಿಲ್ಲ.

ಕೇರಳದಲ್ಲಿ ಬಿರುಸಿನ ಮತದಾನ:

ದೇವರ ನಾಡು ಕೇರಳದಲ್ಲಿ ಎಲ್ಲಾ 140 ಕ್ಷೇತ್ರಗಳಿಗೂ ಶೇ.77ರಷ್ಟು ಬಿರುಸಿನ ಮತದಾನ ನಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವಿಪಕ್ಷ ನಾಯಕ ವಿ.ಡಿ. ಸತೀಸನ್‌, ಕೇಂದ್ರ ಸಚಿವ ಸುರೇಶ್‌ ಗೋಪಿ, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್‌, ಕಾಂಗ್ರೆಸ್‌ ಸಂಸದ ಶಶಿ ತರೂರ್, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌, ನಟ ಮೋಹನ್‌ಲಾಲ್‌ ಸೇರಿದಂತೆ ಪ್ರಮುಖರು ಮತ ಚಲಾಯಿಸಿದರು.

ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ 76,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು, ವೆಬ್‌ಕಾಸ್ಟಿಂಗ್‌ಗಳ ಮೂಲಕ ಎಲ್ಲೆಡೆ ಕಣ್ಗಾವಲಿಟ್ಟಿದ್ದರು.

ಅಸ್ಸಾಂನಲ್ಲೂ ಬಿರುಸು:ಈಶಾನ್ಯ ರಾಜ್ಯ ಅಸ್ಸಾಂನಲ್ಲಿಯೂ ಶೇ.85ರಷ್ಟು ಭರ್ಜರಿ ಮತದಾನ ಅಗಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಮ್ಮ ಪತ್ನಿ ರಿನಿಕಿ ಭಯಾನ್‌ ಶರ್ಮಾ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್‌ ಅಧ್ಯಕ್ಷ ಗೌರವ್‌ ಗೊಗೊಯ್‌ ತಮ್ಮ ತಾಯಿಯೊಂದಿಗೆ ಮತ ಹಾಕಿದರು. ಕಾಂಗ್ರೆಸ್‌- ಬಿಜೆಪಿ ನಡುವಿನ ಪೈಪೋಟಿಯಲ್ಲಿ ಜನರು 722 ಅಭ್ಯರ್ಥಿಗಳ ಭವಿಷ್ಯ ಗುರುವಾರ ಬರೆದಿದ್ದಾರೆ.

ಪುರುಚೇರಿಯಲ್ಲಿ ಅತಿ ಗರಿಷ್ಠ:ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಅತಿ ಗರಿಷ್ಠ ಶೇ.89 ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅದರಲ್ಲಿಯೂ ವೃದ್ಧರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಕಂಡು ಬಂತು. ಇಲ್ಲಿನ ಮತಗಟ್ಟಯೊಂದರಲ್ಲಿ ರೋಬೋಟ್‌ ಮೂಲಕ ಮತದಾರರನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. ಸಿಎಂ ರಂಗಸ್ವಾಮಿ, ಪುದುಚೇರಿ ಗೃಹ ಸಚಿವ ಎ. ನಮಶ್ಶಿವಾಯಂ ಮತ್ತು ಕಾಂಗ್ರೆಸ್ ನಾಯಕ ವಿ. ನಾರಾಯಣಸಾಮಿ ಆರಂಭಿಕ ಮತದಾರರಲ್ಲಿ ಸೇರಿದ್ದಾರೆ.