ಸಾರಾಂಶ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಆತಿಶಿ ಸಿಂಗ್ ರಾಜೀನಾಮೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾದ ಅತಿಶಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ ಹೊಸ ಸರ್ಕಾರ ರಚನೆಯಾಗುವವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ನಿರ್ಗಮಿತ ಸಿಎಂಗೆ ಉಪರಾಜ್ಯಪಾಲರು ಸೂಚಿಸಿದ್ದಾರೆ.
8 ಹಾಲಿಗಳಿಗೆ ಟಿಕೆಟ್ ಕೊಡದ ಕ್ಷೇತ್ರಗಳಲ್ಲಿ ಆಪ್‌ಗೆ ಸೋಲು
ನವದೆಹಲಿ: ವರ್ಚಸ್ಸು ಕಡಿಮೆಯಾಗಿದೆ ಎಂಬ ಕಾರಣಕ್ಕೆ 8 ಶಾಸಕರಿಗೆ ಆಪ್ ಟಿಕೆಟ್ ಕೊಡದೆ ಅವರು ಬಿಜೆಪಿಗೆ ಸೇರಿದ ಬೆನ್ನಲ್ಲೇ, ಅದಷ್ಟೂ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಆಪ್‌ನ ಆಂತರಿಕ ಸಮೀಕ್ಷೆಯಲ್ಲಿ ಈ 8 ಶಾಸಕರಿಗೆ ಜನರ ವಿರೋಧವಿದೆ ಎಂದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿರಲಿಲ್ಲ. ಹೀಗಾಗಿ ಚುನಾವಣೆಗೆ 5 ದಿನ ಮೊದಲು 8 ಶಾಸಕರು ಆಪ್ ಮತ್ತು ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿ, ಮರುದಿನ ಬಿಜೆಪಿ ಸೇರಿದ್ದರು. ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ಈ ಎಲ್ಲಾ ಕ್ಷೇತ್ರಗಳಲ್ಲಿ ಆಪ್ ನೆಲಕಚ್ಚಿದ್ದು, ಆ ಶಾಸಕರ ಬೆಂಬಲದಿಂದ ಬಿಜೆಪಿ ಜಯಭೇರಿ ಸಾಧಿಸಿದೆ.
ದಿಲ್ಲಿ ಸೋಲು ಆಪ್ ಪತನದ ಆರಂಭ, ಸೋಲಿಗೆ ಕೇಜ್ರಿ ಹೊಣೆ: ಪ್ರಶಾಂತ್ ಭೂಷಣ್
ನವದೆಹಲಿ: ದೆಹಲಿ ಚುನಾವಣೆಯಲ್ಲಿ ಆಪ್ ಸೋಲಿಗೆ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇರ ಹೊಣೆ ಎಂದು ಪಕ್ಷದ ಉಚ್ಛಾಟಿತ ನಾಯಕ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಭೂಷಣ್, ‘ಇದು ಆಪ್‌ನ ಸೋಲಿನ ಆರಂಭ. ಆಪ್ ಸೋಲಿಗೆ ಕೇಜ್ರಿವಾಲ್ ಅವರೇ ನೇರ ಹೊಣೆ. 2012ರಲ್ಲಿ ಆಮ್ ಆದ್ಮಿ ಪಕ್ಷವನ್ನು ಪಾರದರ್ಶಕತೆ, ಪ್ರಜಾಪ್ರಭುತ್ವ, ಜವಾಬ್ದಾರಿಯುತ, ಭ್ರಷ್ಟಾಚಾರ ವಿರೋಧಿ ಸಿದ್ಧಾಂತ ಮತ್ತು ಪರ್ಯಾಯ ರಾಜಕಾರಣದ ಮೇಲೆ ಸ್ಥಾಪಿಸಿ ಅಧಿಕಾರ ಪಡೆಯಲಾಗಿತ್ತು. ಆದರೆ ಕೇಜ್ರಿವಾಲ್ ತಮ್ಮ ಶೀಷ್‌ಮಹಲ್, ಐಷಾರಾಮಿ ಜೀವನ ಮತ್ತು ಭ್ರಷ್ಟಾಚಾರಗಳಿಂದ ಕೂಡಿದ ಆಡಳಿತದಿಂದ ಸಿದ್ಧಾಂತವನ್ನು ತಲೆಕೆಳಗಾಗಿಸಿದರು. ಹೀಗಾಗಿ ಆಪ್ ಈ ರೀತಿ ಸೋಲು ಕಂಡಿದೆ’ ಎಂದು ಭೂಷಣ್ ಕಿಡಿಕಾರಿದ್ದಾರೆ.
ಆಪ್ ಶಾಸಕರ ಜೊತೆ ಕೇಜ್ರಿ ಸಭೆ; ಜನರ ಪರ ಹೋರಾಡಲು ಕರೆ
ನವದೆಹಲಿ: ದೆಹಲಿ ವಿಧಾನಸಭೆಗೆ ಆಯ್ಕೆಯಾದ 22 ಶಾಸಕರ ಜೊತೆಗೆ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಇಲ್ಲಿ ಸಭೆ ನಡೆಸಿದರು. ಈ ವೇಳೆ, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು, ಆದರೆ ಶಾಸಕರು ಜನರ ಪರವಾಗಿ ಹೋರಾಡುವ ಕೆಲಸ ನಿಲ್ಲಿಸಬಾರದು ಎಂದು ಸೂಚಿಸಿದರು. ಇದೇ ವೇಳೆ ಮಾತನಾಡಿದ ನಿರ್ಗಮಿತ ಸಿಎಂ ಆತಿಶಿ, ನಾವು ರಚನಾತ್ಮಕ ವಿಪಕ್ಷ ಸ್ಥಾನವನ್ನು ನಿರ್ವಹಿಸಲಿದ್ದೇವೆ. ಬಿಜೆಪಿಯು ಚುನಾವಣೆಗೂ ಮುನ್ನ ನೀಡಿದ್ದ ಪ್ರತಿ ಮಹಿಳೆಯರಿಗೆ ಮಾಸಿಕ 2500 ರು. ಭತ್ಯೆ, ಉಚಿತ 300 ಯೂನಿಟ್ ವಿದ್ಯುತ್ ಸೇರಿ ಹಲವು ಭರವಸೆಗಳನ್ನು ಮಾ.8ರ ಒಳಗೆ ಜಾರಿ ಮಾಡುವಂತೆ ನೋಡಿಕೊಳ್ಳಲಿದ್ದೇವೆ ಎಂದರು.