ಸಾರಾಂಶ
ನವದೆಹಲಿ: ಕೆನಡಾದ ಸರ್ರೆಯಲ್ಲಿರುವ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ ಗುರುವಾರ ಬೆಳಗ್ಗೆ ಗುಂಡಿನ ದಾಳಿಯಾಗಿದೆ. ಇದು ತಿಂಗಳೊಂದರಲ್ಲಿದಾದ 2ನೇ ದಾಳಿಯಾಗಿದೆ. ಜುಲೈನಲ್ಲಿ, ಕೆಫೆ ಶುರುವಾದ ಕೆಲ ದಿನಗಳಲ್ಲೇ ಖಲಿಸ್ತಾನಿಗಳು ದಾಳಿ ಮಾಡ್ಡಿದ್ದರು.
ಮುಂಜಾನೆ 4.35ರ ಸುಮಾರಿಗೆ ಕ್ಯಾಪ್ಸ್ ಕೆಫೆ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, 6 ಕಡೆಗಳಲ್ಲಿ ಗುಂಡಿನ ಗುರುತಾಗಿದೆ. ಅಂತೆಯೇ, ಕಿಟಕಿ ಗಾಜುಗಳು ಒಡೆದಿವೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಜು.10ರಂದು ನಡೆದ ದಾಳಿಯ ಹೊಣೆಯನ್ನು ಖಲಿಸ್ತಾನಿ ಉಗ್ರರು ಹೊತ್ತುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಉತ್ತರಾಖಂಡ: ಮತ್ತೆ 70 ಮಂದಿ ರಕ್ಷಣೆ, 50 ಜನರಿಗಾಗಿ ಶೋಧ
ಕಂಡುಕೇಳರಿಯದ ಮೇಘಸ್ಫೋಟಕ್ಕೆ ಸಿಲುಕಿದ ಉತ್ತರಾಖಂಡದ ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಸೇನೆಯು ಗುರುವಾರ 70 ಜನರನ್ನು ರಕ್ಷಿಸಿದ್ದು, ಇನ್ನು 50 ಜನರು ಪತ್ತೆಯಾಗಬೇಕಿದೆ ಎಂದು ಸೇನೆ ತಿಳಿಸಿದೆ. ಈವರೆಗೆ 276 ಜನರನ್ನು ರಕ್ಷಿಸಲಾಗಿದೆ. ಜೊತೆಗೆ ಮೇಘಸ್ಫೋಟಕ್ಕೆ ತೀವ್ರವಾಗಿ ತತ್ತರಿಸಿರುವ ಧರಾಲಿಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಅತ್ಯಾಧುನಿಕ ಉಪಕರಣಗಳನ್ನು ಏರ್‌ಲಿಫ್ಟ್ ಮಾಡಲು ಸೇನೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ ಮಣ್ಣಿನಡಿ ಸಿಲುಕಿದವರ ಪತ್ತೆಗೆ ರೀಕೋ ರಾಡಾರ್ ಬಳಸಲಾಗುತ್ತಿದ್ದು, ಬದುಕಿರುವವರ ಪತ್ತೆಗೆ 4 ಸ್ನಿಫರ್ ನಾಯಿಗಳು, ಮೃತರ ಪತ್ತೆಗೆ 2 ಕ್ಯಾಡವೆರ್ ನಾಯಿಗಳನ್ನು ಬಳಸಲಾಗುತ್ತಿದೆ. 225 ಸೈನಿಕರು, 69 ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿ ಹಲವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸೇನೆಯ ಚಿನೂಕ್ ಮತ್ತು ಎಂಐ 17 ಹೆಲಿಕಾಪ್ಟರ್‌ಗಳು ಸಹ ರಕ್ಷಣೆಯಲ್ಲಿ ತೊಡಗಿದೆ.
35 ವರ್ಷ ಬಳಿಕ ಒಂದಾಗಿದ್ದ 24 ಸ್ನೇಹಿತರು ನಾಪತ್ತೆ
1990ರಲ್ಲಿ ಪುಣೆಯಲ್ಲಿ 10ನೇ ಕ್ಲಾಸ್ ಒಂದಾಗಿದ್ದ ಓದಿದ್ದ 24 ಸ್ನೇಹಿತರು 35 ವರ್ಷಗಳ ಬಳಿಕ ಒಂದಾಗಿ ಚಾರ್‌ಧಾಂ ಯಾತ್ರೆ ನಿಮಿತ್ತ ಉತ್ತರಾಖಂಡಕ್ಕೆ ತೆರಳಿದ್ದರು. ಇವರು ಸೋಮವಾರ ಸಂಜೆ ಗಂಗೋತ್ರಿಯಿಂದ 10 ಕಿ.ಮೀ ದೂರದಲ್ಲಿ ಸಿಲುಕಿದ್ದರು. ಆ ಬಳಿಕ ಅವರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಸಿಲುಕಿರುವವರ ಪೈಕಿ ಓರ್ವರ ಪುತ್ರ ಹೇಳಿದ್ದಾರೆ.
ಬೀದರ್‌ನಿಂದ ತೆಲಂಗಾಣಕ್ಕೆ ಗಾಂಜಾ ಪೂರೈಕೆ ಜಾಲ ಪತ್ತೆ
ಹೈದರಾಬಾದ್: ತೆಲಂಗಾಣದ ಮಾದಕ ವಸ್ತು ವಿರೋಧಿ ಕಾರ್ಯಪಡೆಯು ಕರ್ನಾಟಕದ ಬೀದರ್‌ನಿಂದ ನೆರೆಯ ತೆಲಂಗಾಣಕ್ಕೆ ಗಾಂಜಾ ಪೂರೈಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದೆ. ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬೆನ್ನಲ್ಲೇ ರಾಜ್ಯದಿಂದ ನೆರೆ ರಾಜ್ಯಕ್ಕೆ ಭಾರೀ ಪ್ರಮಾಣದ ಮಾದಕ ವಸ್ತು ಸಾಗಿಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರು ಹೈದರಾಬಾದ್ ಬಳಿಯ ಖಾಸಗಿ ಕಾಲೇಜೊಂದರ 26 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿಗೆ ಗಾಂಜಾ ಪೂರೈಸುತ್ತಿದ್ದುದು ತಿಳಿದುಬಂದಿದೆ. ಆ.1ರಂದು 2 ಕೆ.ಜಿ. ಗಾಂಜಾದೊಂದಿಗೆ 23 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತ ಅದನ್ನು ಬೀದರ್‌ನ ಮಹಿಳೆಯೊಬ್ಬಳಿಂದ ಖರೀದಿಸಿ ಸಾಗಿಸುತ್ತಿದ್ದ ಎಂದುಬು ತನಿಖೆ ವೇಳೆ ತಿಳಿದುಬಂದಿದೆ.ಆ.5ರಂದು ಡ್ರಗ್ಸ್ ಸರಬರಾಜುದಾರೆಯನ್ನು 4 ಕೆ.ಜಿ. ಗಾಂಜಾದೊಂದಿಗೆ ಬಂಧಿಸಲಾಗಿತ್ತು. ಆಕೆ 2010ರಿಂದ ಈ ದಂಧೆಯಲ್ಲಿ ತೊಡಗಿದ್ದು, ಮಹಾರಾಷ್ಟ್ರದ ಪಾರ್ಲಿ ಹಾಗೂ ಬೀದರ್‌ನ ಪೂರೈಕೆದಾರರಿಂದ ಗಾಂಜಾ ಸಂಗ್ರಹಿಸಿ ಮಾರುತ್ತಿದ್ದಳು. ಆಕೆಯ ಬ್ಯಾಂಕ್ ಖಾತೆಗಳಲ್ಲಿ 1.5 ಕೋಟಿ ರು. ಮೌಲ್ಯದ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ. ಇದರಲ್ಲಿ 26 ಲಕ್ಷ ರು. ಹೈದರಾಬಾದ್‌ನಲ್ಲಿ 51 ವ್ಯಾಪಾರಿಗಳಿಂದ ಬಂದಿದೆ. ಉಳಿದ 1.24 ಕೋಟಿ ರು.ನ ಮೂಲದ ಪರಿಶೀಲನೆ ನಡೆಯುತ್ತಿದೆ.
ಉಪರಾಷ್ಟ್ರಪತಿ ಹುದ್ದೆಗೆ ಸೆ.9ರಂದು ಚುನಾವಣೆ - ಅಧಿಸೂಚನೆ ಪ್ರಕಟ
ನವದೆಹಲಿ: ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆ.9ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ಸಿಕ್ಕಂತೆ ಆಗಿದೆ.
ಅಧಿಸೂಚನೆಯ ಪ್ರಕಾರ ಆ.21 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, 22ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಆ.25ರ ತನಕ ಅವಕಾಶ ಇರಲಿದೆ ಎಂದು ಆಯೋಗ ಹೇಳಿದೆ.ಚುನಾವಣೆಗೆ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆ ಸದಸ್ಯರು ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ. 543 ಲೋಕಸಭಾ ಕ್ಷೇತ್ರಗಳ ಪೈಕಿ ಬರ್ಸಿಹತ್ ಹೊರತುಪಡಿಸಿ 542 ಸದಸ್ಯರು, 245 ರಾಜ್ಯಸಭಾ ಕ್ಷೇತ್ರಗಳ ಪೈಕಿ ಖಾಲಿ ಯಿರುವ 6 ಕ್ಷೇತ್ರಗಳ ಬಿಟ್ಟು 239 ಸಂಸದರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಒಟ್ಟು 781 ಮಂದಿ ಮತ ಚಲಾವಣೆ ಮಾಡಲಿದ್ದು, ಗೆಲುವಿಗೆ 392 ಮತ ಅಗತ್ಯ.
ಎನ್‌ಡಿಎಗೆ 422 ಸಂಸದರ ಬಲರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸದಸ್ಯರ ಸಂಖ್ಯಾಬಲ ಹೆಚ್ಚಿರುವುದರಿಂದ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆಯೇ ಹೆಚ್ಚು. ಎನ್‌ಡಿಎಗೆ ಲೋಕಸಭೆಯಲ್ಲಿ 293, ರಾಜ್ಯಸಭೆಯಲ್ಲಿ 129 ಮಂದಿ ಬೆಂಬಲವಿದ್ದು, ಒಟ್ಟು 422 ಸದಸ್ಯರು ಎನ್‌ಡಿಎ ಪರವಿದ್ದಾರೆ.