ನಟ ಸೈಫ್‌ ಅಲಿ ಖಾನ್‌ ಅವರ ಮೇಲಿನ ದಾಳಿ ಪ್ರಕರಣ : ಛತ್ತೀಸಗಢದಲ್ಲಿ ಶಂಕಿತ ವಶಕ್ಕೆ

| Published : Jan 19 2025, 02:17 AM IST / Updated: Jan 19 2025, 04:45 AM IST

ಸಾರಾಂಶ

ನಟ ಸೈಫ್‌ ಅಲಿ ಖಾನ್‌ ಅವರ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಛತ್ತೀಸಗಢದ ದುರ್ಗ್‌ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಮುಂಬೈ: ನಟ ಸೈಫ್‌ ಅಲಿ ಖಾನ್‌ ಅವರ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಛತ್ತೀಸಗಢದ ದುರ್ಗ್‌ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಮುಂಬೈ ಪೊಲೀಸರು ದಾಳಿಕೋರನ ಫೋಟೋವನ್ನು ರೈಲ್ವೇ ರಕ್ಷಣಾ ಪಡೆಯೊಂದಿಗೆ ಹಂಚಿಕೊಂಡಿದ್ದರು. ಅದರ ಆಧಾರದಲ್ಲಿ ಮುಂಬೈನ ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಿಂದ ಕೋಲ್ಕತಾದ ಶಾಲಿಮಾರ್‌ಗೆ ಹೋಗುತ್ತಿದ್ದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು 31 ವರ್ಷದ ಆಕಾಶ್‌ ಕೈಲಾಶ್‌ ಕನ್ನೋಜಿಯಾ ಎಂದು ಗುರುತಿಸಲಾಗಿದೆ.

ಕೈಲಾಶ್‌ ಸದ್ಯಕ್ಕೆ ಶಂಕಿತನಾಗಿದ್ದು, ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ಮೊದಲು, ಸೈಫ್‌ ಮನೆಯ ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದ್ದವನನ್ನು ಹೋಲುತ್ತಿದ್ದ ಬಡಗಿಯೊಬ್ಬನನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಲಾಗಿತ್ತು.

ಗುರುವಾರ ರಾತ್ರಿ 2:30ರ ಸುಮಾರಿಗೆ ನಟ ಸೈಫ್‌ರ ಮೇಲೆ ಅವರ ಮನೆಯಲ್ಲೇ ಆಗಂತುಕನೊಬ್ಬ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಚಿಕಿತ್ಸೆಯ ಬಳಿಕ ನಟ ಪ್ರಾಣಾಪಾಯದಿಂದ ಪಾರಾಗಿದ್ದು, ದಾಳಿಕೋರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ದಾಳಿ ಬಳಿಕ ಬಟ್ಟೆ ಬದಲಿಸಿ, ಫೋನ್‌ ಕವರ್‌, ಹೆಡ್‌ಫೋನ್‌ ಖರೀದಿಸಿದ್ದ ದಾಳಿಕೋರ

ಮುಂಬೈ: ನಟ ಸೈಫ್ ಅಲಿ ಖಾನ್‌ ಮೇಲೆ ದಾಳಿ ನಡೆಸಿದ್ದ ದಾಳಿಕೋರ, ಘಟನೆಯ ಬಳಿಕ ದಾಳಿ ವೇಳೆ ತಾನು ಧರಿಸಿದ್ದ ನೀಲಿ ಶರ್ಟ್‌ ಬದಲಿಸಿ ಹಳದಿ ಅಂಗಿ ಧರಿಸಿಕೊಂಡು, ದಾದರ್‌ ರೈಲು ನಿಲ್ದಾಣ ಬಳಿ ಫೋನ್‌ ಕವರ್‌ ಮತ್ತು ಹೆಡ್‌ಫೋನ್‌ ಖರೀದಿಸಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ದಾಳಿ ಮಾಡಿದ ಬಳಿಕ ಬಾಂದ್ರಾದಿಂದ ದಾದರ್‌ವರೆಗೆ ಲೋಕಲ್‌ ರೈಲಿನಲ್ಲಿ ತೆರಳಿ, ದಾದರ್‌ ಪ್ಲಾಟ್‌ಫಾರ್ಮ್‌ 1ರ ಬಳಿ ಇದ್ದ ಇರ್ಕಾ ಎಂಬ ಅಂಗಡಿಯಲ್ಲಿ ಇವುಗಳನ್ನು ಖರೀದಿಸಿದ್ದಾನೆ. ಬಳಿಕ ಸುವಿಧಾ ಶೋರೂಂ ಹೊರಗಿನಿಂದ ಕಬೂತರ್‌ ಖಾನಾ ಕಡೆಗೆ ತೆರಳಿದ ಎಂದು ಮೂಲಗಳು ತಿಳಿಸಿವೆ. ಇವು ಸಿಸಿಟೀವಿಯಲ್ಲಿ ಸೆರೆಯಾಗಿದೆ.

ದಾಳಿಕೋರ ಆಕ್ರಮಣಕಾರಿ, ಆದರೆ ಚಿನ್ನ ಮುಟ್ಟಿಲ್ಲ: ಕರೀನಾ

ಮುಂಬೈ: ಬಾಂದ್ರಾದಲ್ಲಿರುವ ತಮ್ಮಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಪತಿಯ ಜತೆಗೆ ತೀವ್ರ ಹೊಡೆದಾಟ ನಡೆಸಿದರೂ

ಕೋಣೆಯಲ್ಲಿ ತೆರೆದೇ ಇಟ್ಟಿದ್ದ ಆಭರಣಗಳನ್ನು ಮಾತ್ರ ಮುಟ್ಟಿಲ್ಲ ಎಂದು ನಟ ಸೈಫ್‌ ಆಲಿ ಖಾನ್‌ ಪತ್ನಿ, ನಟಿ ಕರೀನಾ ಕಪೂರ್ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕರೀನಾ ಕಪೂರ್‌ ಈ ಮಾಹಿತಿ ನೀಡಿದ್ದಾರೆ.ಬಾಂದ್ರಾದಲ್ಲಿರುವ ಸತ್‌ಗುರು ಶರಣ್‌ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ಮನೆ ಮೇಲೆ ಗುರುವಾರ ನುಗ್ಗಿದ್ದ ಕಳ್ಳ ನಟ ಸೈಫ್‌ ಆಲಿಖಾನ್‌ ಮೇಲೆ ಕಿತ್ತಾಟ ನಡೆಸುವ ವೇಳೆ ತೀರಾ ಆಕ್ರಮಣಕಾರಿಯ ವರ್ತಿಸಿ ಚಾಕುವಿನಿಂದ ಆರು ಬಾರಿ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಕಳ್ಳತನದ ಉದ್ದೇಶದಿಂದ ಮನೆಯೊಳಗೆ ಪ್ರವೇಶಿಸಿದ್ದ ಆತ ಅಲ್ಲಿ ತೆರೆದೇ ಇಟ್ಟಿದ್ದ ಚಿನ್ನಾಭರಣಗಳಿಗೆ ಮಾತ್ರ ಕೈಹಾಕಿಲ್ಲ ಎಂದು ಕರೀನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸೈಫ್‌ ಆಲಿ ಖಾನ್‌ರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಅವರ ದೇಹದಲ್ಲಿ ಉಳಿದುಕೊಂಡಿದ್ದ 2.5 ಇಂಚಿನ ಚೂರಿಯ ಭಾಗ ಹೊರತೆಗೆಯಲಾಗಿದೆ. ಸದ್ಯ ಸೈಫ್ ಆಲಿ ಖಾನ್‌ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು 30 ತಂಡಗಳನ್ನು ರಚಿಸಿ, ಹುಡುಕಾಟ ಮುಂದುವರೆಸಿದ್ದಾರೆ.