ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಹತ್ಯೆ, ರೇಪ್‌ ಮುಚ್ಚಿಹಾಕಲು ಯತ್ನ: ಸಿಬಿಐ

| Published : Aug 23 2024, 01:05 AM IST / Updated: Aug 23 2024, 04:55 AM IST

ಸಾರಾಂಶ

ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದರು ಹಾಗೂ ಕೃತ್ಯ ನಡೆದ ಸ್ಥಳಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆರೋಪ

ನವದೆಹಲಿ: ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದರು ಹಾಗೂ ಕೃತ್ಯ ನಡೆದ ಸ್ಥಳಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಆರೋಪಿಸಿದೆ.

ಜೊತೆಗೆ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಸಂತ್ರಸ್ತೆಯ ಸಹೋದ್ಯೋಗಿಗಳು ವಿಡಿಯೋಗಳನ್ನು ಕೇಳಿದ್ದು, ಅವರಲ್ಲಿಯೂ ಕೂಡ ಸಾಕ್ಷಿ ನಾಶ ನಡೆದಿರುವ ಬಗ್ಗೆ ಶಂಕೆ ಮೂಡಿದೆ ಎಂದು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠದೆದುರು ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಹೇಳಿದ್ದಾರೆ.

‘ಘಟನೆ ನಡೆದ ಐದು ದಿನಗಳ ಬಳಿಕ ನಾವು ತನಿಖೆಗಿಳಿದೆವು. ಸ್ಥಳೀಯ ಪೊಲೀಸರು ಸಂಗ್ರಹಿಸಿದ್ದನ್ನು ನಮಗೆ ನೀಡಲಾಯಿತು. ಕೃತ್ಯ ನಡೆದ ಸ್ಥಳದಲ್ಲಿ ಕೆಲ ಬದಲಾವಣೆಗಳನ್ನು ಮಾಡಿರುವುದು ತನಿಖೆಗೆ ಅಡ್ಡಿಪಡಿಸುತ್ತಿದೆ. ಮೊದಲಿಗೆ ಸಂತ್ರಸ್ತೆಗೆ ಆರೋಗ್ಯ ಸರಿ ಇಲ್ಲವೆಂದು ಆಕೆಯ ಪೋಷಕರಿಗೆ ತಿಳಿಸಲಾಗಿತ್ತು. ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಯಿತು. ಆಕೆಯ ಅಂತ್ಯಸಂಸ್ಕಾರದ ಬಳಿಕವಷ್ಟೇ ಎಫ್‌ಐಆರ್‌ ದಾಕಲಿಸಿಕೊಳ್ಳಲಾಗಿದೆ’ ಎಂದು ಮೆಹ್ತಾ ದೂರಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್ ಇದನ್ನು ಅಲ್ಲಗಳೆದಿದ್ದು, ‘ಎಲ್ಲವನ್ನೂ ಚಿತ್ರೀಕರಿಸಲಾಗಿದೆ ಹಾಗೂ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪೊಲೀಸರು ಕೇವಲ ಕಾರ್ಯವಿಧಾನದ ಪಾಲನೆ ಮಾಡಿದ್ದಾರೆ. ಕಳೆದೊಂದು ವಾರದಿಂದ ಸಿಬಿಐ ನಡೆಸಿರುವ ತನಿಖೆಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದರು.

ವಾದ-ಪ್ರತಿವಾದ ನಡೆಯುತ್ತಿದ್ದಾಗ ಸಿಬಲ್‌ ನಗುತ್ತಿದ್ದುದಾಗಿ ಆರೋಪಿಸಿರುವ ಮೆಹ್ತಾ, ‘ಅಮಾನವೀಯ ರೀತಿಯಲ್ಲಿ ಹುಡುಗಿಯೊಬ್ಬಳು ಪ್ರಾಣ ಕಳೆದುಕೊಂಡಿರುವಾಗ ದಯವಿಟ್ಟು ನಗಬೇಡಿ’ ಎಂದಿದ್ದಾರೆ.

==

ಸುಪ್ರೀಂ ಭರವಸೆ : ಏಮ್ಸ್‌ ವೈದ್ಯರ 11 ದಿನದ ಮುಷ್ಕರ ವಾಪಸ್‌

ನವದೆಹಲಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ವಿರೋಧಿಸಿ ಪ್ರತಿಭಟನೆಗಿಳಿದಿದ್ದ ದೆಹಲಿಯ ಏಮ್ಸ್‌ ಹಾಗೂ ಆರ್‌ಎಮ್‌ಎಲ್‌ ಆಸ್ಪತ್ರೆಯ ಸ್ಥಾನಿಕ ವೈದ್ಯರು 11 ದಿನಗಳ ಮುಷ್ಕರವನ್ನು ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ. ಪ್ರತಿಭಟನಾನಿರತ ವೈದ್ಯರಿಗೆ ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದ್ದ ಸುಪ್ರೀಂ ಕೋರ್ಟ್‌ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ಭರವಸೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ತನ್ನ ಈ ನಿರ್ಧಾರದ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಏಮ್ಸ್‌ನ ಸ್ಥಾನಿಕ ವೈದ್ಯರ ಸಂಘ, ‘ಆರ್‌ಜಿ ಕರ್‌ ಪ್ರಕರಣದಲ್ಲಿ ಮದ್ಯಪ್ರವೇಶಿಸಿದ ಸುಪ್ರೀಂ ಕೊರ್ಟ್‌ ವೈದ್ಯರ ಸುರಕ್ಷತೆಯ ಭರವಸೆ ನೀಡಿರುವ ಕಾರಣ ನಾವು ಕರ್ತವ್ಯಕ್ಕೆ ಮರಳುತ್ತಿದ್ದೇವೆ. ನ್ಯಾಯಾಲಯದ ಈ ಕ್ರಮವನ್ನು ಶ್ಲಾಘಿಸುತ್ತೇವೆ ಹಾಗೂ ಅದರ ನಿರ್ದೇಶನಗಳನ್ನು ಅನುಸರಿಸುವಂತೆ ಕರೆ ನೀಡುತ್ತೇವೆ. ರೋಗಿಗಳ ಆರೈಕೆಯೇ ನಮ್ಮ ಆದ್ಯತೆಯಾಗಿರಲಿದೆ’ ಎಂದು ಬರೆದುಕೊಂಡಿದೆ. ಅಂತೆಯೇ ಆರ್‌ಎಮ್‌ಎಲ್‌ ಆಸ್ಪತ್ರೆಯ ವೈದ್ಯರು ಕೂಡ ಶುಕ್ರವಾರ ಬೆಳಗ್ಗೆ 8ರಿಂದ ಕರ್ತವ್ಯಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

==

ವೈದ್ಯೆ ಮೇಲೆ ಗ್ಯಾಂಗ್‌ರೇಪ್‌ ಆಗಿಲ್ಲ: ಸಿಬಿಐ ತನಿಖೆಯಲ್ಲಿ ವ್ಯಕ್ತ

ಕೋಲ್ಕತಾ: 31ರ ಹರೆಯದ ಕೋಲ್ಕತಾ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿಯವರೆಗೆ ನಡೆಸಿರುವ ತನಿಖೆ ಪ್ರಕಾರ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.ವೈದ್ಯೆ ದೇಹದಲ್ಲಿ 150 ಮಿಲಿಗ್ರಾಂ ವೀರ್ಯ ಇತ್ತು. ಇಷ್ಟೊಂದು ಗಮನಾರ್ಹ ಪ್ರಮಾಣದ ವೀರ್ಯ ಇರುವ ಕಾರಣ ಇದು ಗ್ಯಾಂಗ್‌ರೇಪ್ ಎಂದು ವೈದ್ಯೆಯ ತಂದೆ ಆರೋಪಿಸಿದ್ದರು.ಫೋರೆನ್ಸಿಕ್ ವರದಿಯು ಬಂಧಿತ ಆರೋಪಿ ಸಂಜಯ ರಾಯ್‌ ಮಾತ್ರ ವೈದ್ಯೆಯ ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ಸೂಚಿಸಿದೆ. ಡಿಎನ್‌ಎ ವರದಿ ಕೂಡ ಒಬ್ಬ ವ್ಯಕ್ತಿಯ ಭಾಗೀದಾರಿಕೆ ದೃಢಪಡಿಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

==

ವೈದ್ಯೆ ಮೇಲೆ ರೇಪ್‌ ಮಾಡಿದ ರಾಯ್‌ ವಿಕೃತ ಕಾಮಿ

ಕೋಲ್ಕತಾ: ಬಂಗಾಳ ವೈದ್ಯೆ ರೇಪ್ ಕೇಸ್‌ ದೇಶಾದ್ಯಂತ ಆಕ್ರೋಶದ ಕಿಚ್ಚು ಹೆಚ್ಚಿಸುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುವ ಆಗ್ರಹ ಜೋರಾಗಿದೆ. ಆದರೆ ‘ವೈದ್ಯೆ ಮೇಲೆ ಹೀನ ಕೃತ್ಯ ನಡೆಸಿದ ಸಂಜಯ್‌ ರಾಯ್‌ ವಿಕೃತ ಕಾಮಿಯಾಗಿದ್ದು, ಈತನಿಗೆ ತಾನು ಮಾಡಿದ ಹೀನ ಕೃತ್ಯದ ಕುರಿತು ಕಿಂಚಿತ್ತೂ ಪಶ್ಚಾತ್ತಾಪ ಕಾಡುತ್ತಿಲ್ಲ’ ಎಂದು ಸಿಬಿಐ ಹೇಳಿದೆ.

ರಾಯ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಆ ಬಗ್ಗೆ ಆತನಿಗೆ ಯಾವುದೇ ಪಾಪ ಪ್ರಜ್ಞೆ ಕಾಡುತ್ತಿಲ್ಲ. ಪೊಲೀಸರು ಆತನಿಗೆ ಸೈಕ್ರೋಮೆಟ್ರಿಕ್ ಪರೀಕ್ಷೆ ನಡೆಸಿದಾಗಲೂ ಆತ ಯಾವುದೇ ಭಾವನೆಗಳನ್ನು ವ್ಯಕ್ತ ಪಡಿಸಿರಲಿಲ್ಲ. ಪ್ರಾಣಿಗಳ ಪ್ರವೃತ್ತಿ ಹೊಂದಿರುವ ಈತ ವೈದ್ಯೆ ಮೇಲೆ ಲೈಂಗಿಕ ವಿಕೃತಿ ಮೆರೆದಿದ್ದಾನೆ ಎಂದು ಕೇಂದ್ರೀಯಾ ತನಿಖೆ ಸಂಸ್ಥೆ ಹೇಳಿದೆ.