ರಾಜಸ್ಥಾನದಲ್ಲಿ ರೈಲು ಹಳಿ ತಪ್ಪಿಸಲು ಯತ್ನ: ಸಿಮೆಂಟ್ ಬ್ಲಾಕ್‌ಗಳಿಂದ ಕಿಡಿಗೇಡಿಗಳ ದುಷ್ಕೃತ್ಯ

| Published : Sep 11 2024, 01:06 AM IST / Updated: Sep 11 2024, 05:33 AM IST

ಸಾರಾಂಶ

ರಾಜಸ್ಥಾನದ ಅಜ್ಮೇರ್ ಬಳಿ ಸರಕು ಸಾಗಣೆ ರೈಲು ಹಳಿಯಲ್ಲಿ ಕಿಡಿಗೇಡಿಗಳು ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಿ ರೈಲು ಹಳಿ ತಪ್ಪಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೈಪುರ: ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿಸುವುದಕ್ಕೆ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ ಬೆನ್ನಲ್ಲೇ ಮತ್ತೊಂದು ಇಂಥದ್ದೇ ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ. ಅಜ್ಮೇರ್‌ ಬಳಿ ಸರಕು ಸಾಗಣೆ ಕಾರಿಡಾರ್ ಮೇಲೆ ಕಿಡಿಗೇಡಿಗಳು 2 ಸಿಮೆಂಟ್‌ ಬ್ಲಾಕ್‌ಗಳನ್ನಿಟ್ಟು, ಗೂಡ್ಸ್‌ ರೈಲು ಹಳಿ ತಪ್ಪಿಸುವುದಕ್ಕೆ ಯತ್ನಿಸಿದ್ದಾರೆ.

ಭಾನುವಾರ ತಡರಾತ್ರಿ ಸರದ್ನಾ ಮತ್ತು ಬಂಗಡ್‌ ನಿಲ್ದಾಣಗಳ ನಡುವೆ ರೈಲು ಹಳಿಯಲ್ಲಿ ಇರಿಸಲಾಗಿದ್ದ ಸಿಮೆಂಟ್‌ ಬ್ಲಾಕ್‌ಗೆ ಗೂಡ್ಸ್‌ ರೈಲು ಡಿಕ್ಕಿಯಾಗಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ.

ಸೋಮವಾರ ಉತ್ತರ ಪ್ರದೇಶದಲ್ಲಿ ಕಾಳಿಂದಿ ಎಕ್ಸ್‌ಪ್ರೆಸ್‌ ಸಂಚರಿಸುತ್ತಿದ್ದ ರೈಲು ಮಾರ್ಗದ ಹಳಿ ಮೇಲೆ ದುಷ್ಕರ್ಮಿಗಳು ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್‌ ಬಾಟೆಲ್‌, ಬೆಂಕಿ ಪೊಟ್ಟಣ ಇರಿಸಿದ್ದರು. ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದಿತ್ತು. ಆದರೆ ಹಳಿ ತಪ್ಪಿರಲಿಲ್ಲ.