ಅಯೋಧ್ಯೆ ಇನ್ನು ಜಗತ್ತಿನ ಅತಿದೊಡ್ಡ ಪ್ರವಾಸಿ ಕ್ಷೇತ್ರ!

| Published : Jan 23 2024, 01:45 AM IST / Updated: Jan 23 2024, 12:21 PM IST

ಅಯೋಧ್ಯೆ ಇನ್ನು ಜಗತ್ತಿನ ಅತಿದೊಡ್ಡ ಪ್ರವಾಸಿ ಕ್ಷೇತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ವಾರ್ಷಿಕ 5 ಕೋಟಿ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಅಂದಾಜು ಹಾಕಲಾಗಿದೆ. ಪ್ರಸ್ತುತ ತಿರುಪತಿಗೆ 3 ಕೋಟಿ, ಸ್ವರ್ಣ ಮಂದಿರಕ್ಕೆ 3.5 ಕೋಟಿ ಮಂದಿ ಭೇಟಿ ವಾರ್ಷಿಕವಾಗಿ ಭೇಟಿ ನೀಡುತ್ತಿದ್ದಾರೆ. ವ್ಯಾಟಿಕನ್ ಸಿಟಿಗೆ 90 ಲಕ್ಷ, ಮೆಕ್ಕಾಗೆ 2 ಕೋಟಿ ಪ್ರವಾಸಿಗರು ವಾರ್ಷಿಕವಾಗಿ ಭೇಟಿ ನೀಡುತ್ತಿದ್ದಾರೆ.

ನವದೆಹಲಿ: ಸೋಮವಾರ ಉದ್ಘಾಟನೆಗೊಂಡು ಭಕ್ತರ ದರ್ಶನಕ್ಕೆ ತೆರೆದುಕೊಂಡಿರುವ ರಾಮನ ಅಯೋಧ್ಯೆ ಶೀಘ್ರವೇ ವಿಶ್ವದ ಅತಿದೊಡ್ಡ ಧಾರ್ಮಿಕ ಪ್ರವಾಸ ತಾಣ ಎನ್ನಿಸಿಕೊಳ್ಳಲಿದೆ. ಅಯೋಧ್ಯೆಗೆ ಪ್ರತಿವರ್ಷ 5 ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

ಪ್ರಸ್ತುತ ದೇಶದಲ್ಲಿ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕ್ಷೇತ್ರಗಳೆಂದರೆ ತಿರುಪತಿ ಮತ್ತು ಪಂಜಾಬ್‌ನ ಸ್ವರ್ಣಮಂದಿರ. 

ತಿರುಪತಿಗೆ ವಾರ್ಷಿಕ 2.5 ರಿಂದ 3 ಕೋಟಿ ಪ್ರವಾಸಿಗರು ಭೇಟಿ ನೀಡಿದರೆ, ಸ್ವರ್ಣ ಮಂದಿರಕ್ಕೆ 3 ರಿಂದ 3.5 ಕೋಟಿ ಮಂದಿ ಭೇಟಿ ನೀಡುತ್ತಾರೆ. 

ಉಳಿದಂತೆ ಜಾಗತಿಕವಾಗಿ ಪ್ರಮುಖ ದಾರ್ಮಿಕ ಸ್ಥಳಗಳಾದ ವ್ಯಾಟಿಕನ್‌ ಸಿಟಿಗೆ ವಾರ್ಷಿಕ 90 ಲಕ್ಷ ಮಂದಿ ಹಾಗೂ ಸೌದಿ ಅರೇಬಿಯಾದ ಮೆಕ್ಕಾಗೆ 2 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. 

ಹೀಗಾಗಿ ಮುಂದಿನ ದಿನಗಳಲ್ಲಿ ಅಯೋಧ್ಯೆ ವಿಶ್ವದ ಅತಿದೊಡ್ಡ ಪ್ರವಾಸಿ ತಾಣ ಎನಿಸಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.

ಈಗಾಗಲೇ 85 ಸಾವಿರ ಕೋಟಿ ರು. ವೆಚ್ಚದಲ್ಲಿ ಅಯೋಧ್ಯೆಯನ್ನು ಮರು ನಿರ್ಮಾಣ ಮಾಡಲಾಗುತ್ತಿದ್ದು, ಸುಸಜ್ಜಿತ ವಿಮಾನ ಮತ್ತು ರೈಲು ನಿಲ್ದಾಣಗಳು, ದೇಶದ ಎಲ್ಲೆಡೆಗೂ ಸಂಪರ್ಕ ಕಲ್ಪಿಸುವ ರಸ್ತೆಮಾರ್ಗಗಳು ನಿರ್ಮಾಣವಾದ ಬಳಿಕ ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ. 

ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸಲು ಈಗಾಗಲೇ ಹೋಟೆಲ್‌, ರೆಸಾರ್ಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 

ಜಿಡಿಪಿಗೂ ಬೆಂಬಲ: ಪ್ರವಾಸೋದ್ಯಮ ಕೋವಿಡ್‌ ಪೂರ್ವದಲ್ಲಿ 16 ಲಕ್ಷ ಕೋಟಿ ರು. ಕೊಡುಗೆಯನ್ನು ನೀಡುತ್ತಿತ್ತು. ಇದೀಗ ಧಾರ್ಮಿಕ ಪ್ರವಾಸೋದ್ಯಮದ ನಿರಂತರ ಅಭಿವೃದ್ಧಿಯಿಂದಾಗಿ 2033ರ ವೇಳೆಗೆ 36 ಲಕ್ಷ ಕೋಟಿ ರು. ಕೊಡುಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.