70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರು. ಆರೋಗ್ಯ ವಿಮೆ! ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

| Published : Sep 12 2024, 01:49 AM IST / Updated: Sep 12 2024, 05:16 AM IST

ಸಾರಾಂಶ

70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ವಿಮಾ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ಆರ್ಥಿಕ ಹೊರೆಯಿಂದ ಮುಕ್ತಿ ನೀಡಲಾಗುವುದು.

ವದೆಹಲಿ: ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎಂಬ ಹಿರಿಮೆ ಹೊಂದಿರುವ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯನ್ನು 70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ವಯೋಮಿತಿಯವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಿತಿಯ ಎಲ್ಲಾ ನಾಗರಿಕರಿಗೂ ಇನ್ನು ಮುಂದೆ 5 ಲಕ್ಷ ರು.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರೈಸಿದಂತೆ ಆಗಿದೆ. ಜೊತೆಗೆ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ದೊಡ್ಡ ಆರ್ಥಿಕ ಹೊರೆಯನ್ನು ನಿವಾರಿಸುವ ಬಹುದೊಡ್ಡ ಕೊಡುಗೆಯನ್ನು ಸರ್ಕಾರ ಹಿರಿಯರ ಸಮುದಾಯಕ್ಕೆ ನೀಡಿದಂತಾಗಿದೆ.

ಭರ್ಜರಿ ಕೊಡುಗೆ:

ಹಾಲಿ ಜಾರಿಯಲ್ಲಿದ್ದ ಆಯುಷ್ಮಾನ್‌ ಭಾರತ್ ವಿಮಾ ಯೋಜನೆ 16-59ರ ವಯೋಮಿತಿವರೆಗೆ ಮಾತ್ರ (ಕೆಲವೆಡೆ ವಯೋಮಿತಿ ವಿನಾಯ್ತಿ ಇದೆ) ಸೀಮಿತವಾಗಿತ್ತು. ಬಡವರಿಗೆ ಮಾತ್ರ ಲಭ್ಯವಿತ್ತು. ಜೊತೆಗೆ ಇಡೀ ಕುಟುಂಬಕ್ಕೆ ಸೇರಿ ವಾರ್ಷಿಕ 5 ಲಕ್ಷ ರು. ವಿಮೆ ನೀಡಲಾಗುತ್ತಿತ್ತು. ಆದರೆ ಇದೀಗ ಯೋಜನೆಯನ್ನು 70 ವರ್ಷದ ತುಂಬಿದ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿದೆ. ಜೊತೆಗೆ ಇದಕ್ಕೆ ಫಲಾನುಭವಿಗಳಿಗೆ ಯಾವುದೇ ಆದಾಯ ಮಿತಿಯನ್ನು ನಿಗದಿ ಮಾಡಿಲ್ಲ. ಹೀಗಾಗಿ ದೇಶದ 4.5 ಕೋಟಿ ಕುಟುಂಬಗಳ 6 ಕೋಟಿ ಜನರು ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ ಯೋಜನೆಯ ಲಾಭ ಪಡೆಯಬಹುದಾಗಿದೆ.

ಈ ಯೋಜನೆ ಫಲಾನುಭವಿಗಳಿಗೆ ವಿಶೇಷ ಕಾರ್ಡ್‌ ನೀಡಲಾಗುವುದು. ಮೊದಲ ವರ್ಷ ಈ ಯೋಜನೆಗಾಗಿ 3437 ಕೋಟಿ ರು. ವಿನಿಯೋಗಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಸಚಿವ ಅಶ್ವಿನ್‌ ವೈಷ್ಣವ್‌ ಮಾಹಿತಿ ನೀಡಿದರು.

ಹಿರಿಯರಿಗೆ ಆಯುಷ್ಮಾನ್‌ ಲಾಭ ಹೇಗೆ?

ಹಾಲಿ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಗೆ ಒಳಪಟ್ಟವರು ಕೂಡಾ ಈ ಯೋಜನೆ ಲಾಭ ಪಡೆಯಬಹುದು.

ಹೀಗೆ ಲಾಭ ಪಡೆದವರಿಗೆ ಹೊಸ ಯೋಜನೆಯ 5 ಲಕ್ಷದ ವಿಮೆ ಜೊತೆಗೆ ಹಳೆ ವಿಮೆಯ 5 ಲಕ್ಷದ ಲಾಭವೂ ಲಭ್ಯ

ಒಂದು ಕುಟುಂಬದಲ್ಲಿ 70 ವರ್ಷ ಮೇಲ್ಪಟ್ಟ ಇಬ್ಬರು ಸದಸ್ಯರು ಇದ್ದರೆ, ಅವರು 5 ಲಕ್ಷ ರು.ವಿಮೆ ಹಂಚಿಕೊಳ್ಳಬೇಕು

ಇತರೆ ಸರ್ಕಾರಿ ವಿಮೆ ಯೋಜನೆ ವ್ಯಾಪ್ತಿಗೆ ಒಳಪಟ್ಟವರು ಅದನ್ನು ಉಳಿಸಿಕೊಳ್ಳಬಹುದು/ ಹೊಸತು ಪಡೆಯಬಹುದು

ಖಾಸಗಿ ವಿಮಾ ಸೌಲಭ್ಯ ಪಡೆದುಕೊಂಡವರು ಕೂಡಾ ಈ ಹೊಸ ಯೋಜನೆಯಲ್ಲಿ ಭಾಗಿಯಾಗಬಹುದು