ರಾಜಸ್ಥಾನದ ಕೋಟಾದಲ್ಲಿರುವ ವಿಜ್ಞಾನ ನಗರದಲ್ಲಿ ಬಿ ಟೆಕ್‌ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೊಹಮ್ಮದ್‌ ಸೀಲಿಂಗ್‌ ಫ್ಯಾನ್‌ಗೆ ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೋಟಾ: ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗೆ ಕೋಚಿಂಗ್‌ ಸೆಂಟರ್‌ ಹಬ್‌ ಆಗಿರುವ ರಾಜಸ್ಥಾನದ ಕೋಟಾದಲ್ಲಿ ಬಿ-ಟೆಕ್‌ ವಿದ್ಯಾರ್ಥಿಯೊಬ್ಬ ತನ್ನ ಕೊಠಡಿಯಲ್ಲಿ ಸೀಲಿಂಗ್‌ ಫ್ಯಾನ್‌ಗೆ ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದಕ್ಕೂಮೊದಲು ಜನವರಿ ತಿಂಗಳೊಂದರಲ್ಲೇ ಕೋಟಾದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿತ್ತು. ಹೀಗಾಗಿ ಇದು ವರ್ಷದ 3ನೇ ಆತ್ಮಹತ್ಯಾ ಪ್ರಕರಣವಾಗಿದೆ.ಈ ಕುರಿತು ಮಾಹಿತಿ ನೀಡಿದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮವೀರ್‌ ಸಿಂಗ್‌, ‘ಮೊಹಮ್ಮದ್‌ ಎಂಬ ವಿದ್ಯಾರ್ಥಿ 2016ರಲ್ಲೇ ಕೋಟಾಗೆ ಬಂದು ವಿಜ್ಞಾನ ನಗರದ ಪಿಜಿಯಲ್ಲಿ ನೆಲೆಸಿದ್ದಾನೆ. 2019ರಿಂದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಲ್ಲಿ ಆನ್‌ಲೈನ್‌ ಬಿ.ಟೆಕ್‌ ಪದವಿ ವ್ಯಾಸಂಗ ಮಾಡುತ್ತಿದ್ದು, ಬುಧವಾರ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಶವಾಗಾರದಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದರು.