ರನ್‌ವೇ ಮೇಲೇ ತಿಂಡಿ, ಊಟ: ಇಂಡಿಗೋಗೆ ಕೇಂದ್ರ ನೋಟಿಸ್‌

| Published : Jan 17 2024, 01:51 AM IST / Updated: Jan 17 2024, 09:23 AM IST

ಸಾರಾಂಶ

ವಿಮಾನ ವಿಳಂಬದ ಸಮಯದಲ್ಲಿ ಪ್ರಯಾಣಿಕರಿಗೆ ಸಮರ್ಪಕ ಸೌಲಭ್ಯ ಒದಗಿಸದ ಮುಂಬೈ ವಿಮಾನ ನಿಲ್ದಾಣಕ್ಕೆ ಹಾಗೂ ಇಂಡಿಗೊ ವಿಮಾನ ಸಂಸ್ಥೆಗೆ ಕೇಂದ್ರ ಸರ್ಕಾರ ಶೋಕಾಸ್‌ ನೋಟಿಸ್‌ ನೀಡಿದೆ.

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಮೇಲೆಯೇ ಕುಳಿತು ಪ್ರಯಾಣಿಕರು ತಿಂಡಿ, ಊಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ಶೋಕಾಸ್‌ ನೋಟಿಸ್‌ ನೀಡಿದೆ.

ದಟ್ಟ ಮಂಜು ಆವರಿಸಿದ್ದ ಪರಿಣಾಮ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ದೀರ್ಘಕಾಲ ನಿಲ್ಲಿಸಿ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ನೀಡಿರಲಿಲ್ಲ.

ಶೌಚಾಲಯ, ಆಹಾರ, ವಿಶ್ರಾಂತಿಗೆ ಸೂಕ್ತ ಸೌಲಭ್ಯ ಸಿಗದ ಕಾರಣ ರನ್‌ವೇ ಮೇಲೆ ಕುಳಿತು ಪ್ರಯಾಣಿಕರು ತಿಂಡಿ, ಊಟ ಮಾಡುತ್ತ ವಿರಮಿಸುತ್ತಿದ್ದ ದೃಶ್ಯ ವೈರಲ್‌ ಆಗಿತ್ತು.

ನಂತರ ಕೆಲವು ಪ್ರಯಾಣಿಕರು ವಿಮಾನಯಾನ ನಿರ್ವಹಣಾ ಸಂಸ್ಥೆಯ ಕುರಿತು ಆಕ್ರೋಶವನ್ನೂ ಹೊರಹಾಕಿದ್ದರು.

ನಂತರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಸೋಮವಾರ ತಡರಾತ್ರಿ ಮಹತ್ವದ ಸಭೆ ನಡೆಸಿದ್ದರು.

ಇದರ ಬೆನ್ನಲ್ಲೇ ಮಂಗಳವಾರ ಮುಂಜಾನೆ ಎರಡೂ ಸಂಸ್ಥೆಗಳಿಗೆ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ನೋಟಿಸ್‌ ನೀಡಿದೆ.