ಸಾರಾಂಶ
ದುಬೈ: ಕಳೆದ ತಿಂಗಳು ಕಂಡು ಕೇಳರಿಯದ ಮಳೆಗೆ ತತ್ತರಿಸಿದ್ದ ದುಬೈ ನಗರದ ಮೇಲೆ ಮತ್ತೆ ವರುಣ ಕೆಂಗಣ್ಣು ಬೀರಿದ್ದಾನೆ. ಬುಧವಾರ ರಾತ್ರಿಯಿಂದ ದುಬೈ ಸೇರಿದಂತೆ ಯುಎಇನ ಹಲವು ನಗರಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮತ್ತೆ ಪ್ರವಾಹದ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ.
ಭಾರೀ ಬಿರುಗಾಳಿ ಸಹಿತ ಮಳೆಯ ಪರಿಣಾಮ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು ವಾಹನ ಸಂಚಾರ ಬಹುತೇಕ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಹಲವು ವಿಮಾನಗಳ ಸಂಚಾರ ರದ್ದಾಗಿದ್ದರೆ, ಇನ್ನು ಕೆಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಜೊತೆಗೆ ದುಬೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಸರ್ಕಾರಿ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಸೂಚಿಸಿದೆ. ಶಾಲೆಗಳನ್ನೂ ಆನ್‌ಲೈನ್ ಮೂಲಕವೇ ನಡೆಸಲು ಸೂಚಿಸಲಾಗಿದೆ. ವಾಹನ ಸವಾರರು ಅವಶ್ಯಕವಾಗಿ ಮನೆಯಿಂದ ಹೊರಬರದಂತೆ ಸೂಚನೆ ನೀಡಿದೆ. ಕಡಲತೀರಕ್ಕೆ ತೆರಳದಂತೆ, ನಾವಿಕರಿಗೆ ಎರಡು ದಿನ ಹಡಗು ತೆಗೆದಂತೆ ಎಚ್ಚರಿಕೆ ನೀಡಿದೆ.
ಮೆಟ್ರೋ ಸಂಚಾರ ವಿಸ್ತರಣೆ:ಭಾರಿ ಮಳೆ ಹಾಗೂ ಪ್ರತಿಕೂಲ ವಾತಾವರಣೆದ ನಡುವೆಯೂ ದುಬೈ ಮೆಟ್ರೋ ಸೇವಾ ಅವಧಿಯನ್ನು ಮಧ್ಯರಾತ್ರಿ 12ರಿಂದ ಮರುದಿನ ಮುಂಜಾನೆ 5 ಗಂಟೆ ವರೆಗೆ ವಿಸ್ತರಣೆ ಮಾಡಿದೆ. ರಸ್ತೆಯಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮೆಟ್ರೋ ಸೇವೆ ಬಳಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರ ಸೂಚನೆ ನೀಡಿದೆ.