ಯೂ ಟರ್ನ್‌: ಮೋದಿ ಹೊಗಳಿದ ಬದರಿ ಶಂಕರಾಚಾರ್ಯ

| Published : Jan 22 2024, 02:20 AM IST / Updated: Jan 22 2024, 11:44 AM IST

ಸಾರಾಂಶ

ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತವಾಗಿದೆ. ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿಯೂ ಇಷ್ಟೊಂದು ಹಿಂದೂ ಪರ ನಿಂತಿರಲಿಲ್ಲ ಎಂದು ಅವಿಮುಕ್ತೇಶ್ವರಾನಂದರು ಹೇಳಿಕೆ ನೀಡಿದ್ದಾರೆ.

ನವದೆಹಲಿ: ‘ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಮಾಡಿಸಬಾರದು’ ಎಂದು ಹಾಗೂ ‘ಕಾಶಿ ಕಾರಿಡಾರ್‌ಗೆ ಅನೇಕ ಹಿಂದೂ ಮಂದಿರಗಳನ್ನು ಧ್ವಂಸಗೊಳಿಸಿದ್ದ ಮೋದಿ ಅವರು ಮೊಘಲ್‌ ದೊರೆ ಬಾಬರ್‌ಗಿಂತ ಕ್ರೂರಿ’ ಎಂದಿದ್ದ ಬದರಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಭಾನುವಾರ ಯೂ-ಟರ್ನ್‌ ಹೊಡೆದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸತ್ಯವೆಂದರೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತವಾಗಿದೆ.

ಇದು ಸಣ್ಣ ವಿಷಯವಲ್ಲ, ನಾವು ಇದನ್ನು ಹಲವಾರು ಬಾರಿ ಸಾರ್ವಜನಿಕವಾಗಿ ಹೇಳಿದ್ದೇವೆ, ನಾವು ಮೋದಿ ವಿರೋಧಿಯಲ್ಲ. ಆದರೆ ಮೋದಿ ಅಭಿಮಾನಿಗಳು’ ಎಂದರು.‘ನಮಗೆ ಮೋದಿ ಅಚ್ಚುಮೆಚ್ಚು. ಏಕೆಂದರೆ ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿ ಇಷ್ಟು ಧೈರ್ಯವಾಗಿ ಹಿಂದೂಗಳ ಪರ ನಿಂತಿದ್ದಾರೆ? 

ಹಿಂದೂ ಭಾವನೆಗಳನ್ನು ಬೆಂಬಲಿಸುವ ಅಂತಹ ಮೊದಲ ಪ್ರಧಾನಿ ಅವರು’ ಎಂದರು,‘ನಾವು ಯಾರನ್ನೂ ಟೀಕಿಸುತ್ತಿಲ್ಲ. ಆದರೆ ನೀವು, ಮಾಧ್ಯಮಗಳು ಒಂದೇ ಅಜೆಂಡಾವನ್ನು ಹೊಂದಿದ್ದೀರಿ. 

ನೀವು ನನ್ನನ್ನು ಮೋದಿ ವಿರೋಧಿ ಎಂದು ಸಾಬೀತುಪಡಿಸಿ. ಮೋದಿ ತಮ್ಮ ಗೃಹ ಸಚಿವರ ಮೂಲಕ 370 ನೇ ವಿಧಿಯನ್ನು ರದ್ದುಗೊಳಿಸಿದಾಗ ನಾವು ಅದನ್ನು ಸ್ವಾಗತಿಸಲಿಲ್ಲವೇ?’ ಎಂದೂ ಪ್ರಶ್ನಿಸಿದರು.

ಮಂದಿರ ಅಪೂರ್ಣ ಟೀಕೆಗೆ ಟ್ರಸ್ಟ್‌ ಮುಖ್ಯಸ್ಥರ ಸ್ಪಷ್ಟನೆ
ಅಯೋಧ್ಯೆಯ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ವಿಧಾನಗಳ ಕುರಿತು ಇಬ್ಬರು ಶಂಕರಾಚಾರ್ಯರ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ‘ನಾವು ನುಡಿದಂತೆ ರಾಮಮಂದಿರ ಗರ್ಭಗುಡಿ ಇರುವ ನೆಲಮಹಡಿ ಕೆಲಸ ಪೂರ್ಣಗೊಳಿಸಿದ್ದೇವೆ. 

ಹೀಗಾಗಿ ಅದು ಅಪೂರ್ಣ ಎನ್ನಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿಶ್ರಾ, ‘ಶಂಕರಾಚಾರ್ಯರು ಧರ್ಮಗುರುಗಳು. ಅವರ ಮುಂದೆ ನಾನು ಯಾರೂ ಅಲ್ಲ. 

ಅವರು ಸನಾತನ ಧರ್ಮದ ಉನ್ನತ ಗುರುಗಳು. ಅವರ ಕುರಿತು ನಾನು ಹೇಳಲ್ಲ. ಆದರೆ ನಾನು ರಾಷ್ಟ್ರಕ್ಕೆ ಈ ಬಗ್ಗೆ ಸಂದೇಶ ನೀಡಲು ಬಯಸುತ್ತೇನೆ. 

ಶ್ರೀರಾಮನ ವಿಗ್ರಹವನ್ನು ಮಂದಿರದ ನೆಲಮಹಡಿಯಲ್ಲಿ, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳಿಸಲಾಗುವುದು ಎಂದು ಘೋಷಿಸಿದ್ದೆವು. 

ಅಂತೆಯೇ ಇದೀಗ ಗರ್ಭಗುಡಿ ಮತ್ತು ಐದು ಮಂಟಪಗಳಿರುವ ಮಂದಿರದ ನೆಲಮಹಡಿ ಪೂರ್ತಿಯಾಗಿ ನಿರ್ಮಾಣವಾಗಿದೆ’ ಎಂದಿದ್ದಾರೆ.

ಜೊತಗೆ ಅಲ್ಲದೇ ಅಪೂರ್ಣವಾಗಿ ಉಳಿದಿರುವುದು ಮಂದಿರದ ಮೊದ ಮಹಡಿ, ಅಲ್ಲಿ ರಾಮದರ್ಬಾರ್ ಇದೆ. ಅಲ್ಲಿ ರಾಜಾರಾಮ ಸೀತೆಯ ಜೊತೆ ಕುಳಿತುಕೊಳ್ಳುತ್ತಾನೆ. ಮೊದಲ ಮಹಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತರು ಇರುತ್ತಾರೆ’ ಎಂದಿದ್ದಾರೆ.