ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆ ಹಿಂದಿನ ಷಡ್ಯಂತ್ರದ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆ ಹಿಂದಿನ ಷಡ್ಯಂತ್ರದ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಪ್ರಕರಣದಲ್ಲಿ ಇತರೆ ಐವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಸೋಮವಾರ ಆದೇಶ ಹೊರಡಿಸಿದೆ.
‘ಉಮರ್ ಹಾಗೂ ಶರ್ಜೀಲ್ ವಿರುದ್ಧದ ಆರೋಪಗಳಿಗೆ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಉಳಿದ ಆರೋಪಿಗಳಿಗೆ ಹೋಲಿಸಿದರೆ ಇವರಿಬ್ಬರ ಮೇಲಿನ ಆರೋಪ ಗಂಭೀರವಾಗಿವೆ. ದಂಗೆಗೆ ಸಂಬಂಧಿಸಿ ಯೋಜನೆ, ಜನರ ಸೇರಿಸುವಿಕೆ, ಸಮಗ್ರ ಕಾರ್ಯತಂತ್ರದ ನಿರ್ದೇಶವನ್ನು ನೋಡಿದರೆ ಇದೊಂದು ಸಾಮಾನ್ಯ, ಸಣ್ಣ ಅಥವಾ ಸ್ಥಳೀಯ ಘಟನೆಯಂತಿರದೆ ವ್ಯವಸ್ಥಿತ ಮತ್ತು ವಿಸ್ತಾರವಾದಂತಿದೆ’ ಎಂದ ನ್ಯಾ। ಅರವಿಂದ ಕುಮಾರ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠ ಜಾಮೀನು ನಿರಾಕರಿಸಿದೆ. ಜತೆಗೆ, ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಬಳಿಕ ಅಥವಾ 1 ವರ್ಷದ ನಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ.
ಅತ್ತ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್, ಜಾಮೀನು ಪಡೆದ ಆರೋಪಿಗಳಿಗೆ 12 ಷರತ್ತುಗಳನ್ನು ವಿಧಿಸಿದೆ. ಒಂದು ವೇಳೆ ಅವರೇನಾದರೂ ಆ ಷರತ್ತುಗಳನ್ನು ಉಲ್ಲಂಘಿಸಿದರೆ ಅವರ ಜಾಮೀನು ರದ್ದುಗೊಳ್ಳಲಿದೆ ಎಂದೂ ಎಚ್ಚರಿಸಿದೆ.
ಏನಿದು ಪ್ರಕರಣ?:
ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ 2020ರ ಫೆ.20ರಂದು ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಧಂಗೆಯಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉಮರ್ ಖಾಲಿದ್ ಸೇರಿ ಇತರೆ ಆರೋಪಿಗಳನ್ನು ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ವಿಚಾರಣಾ ನ್ಯಾಯಾಲಯಲ್ಲಿ ನಡೆಯುತ್ತಿದೆ.
ಇನ್ನು ಜೈಲೇ ನನ್ನ ಬದುಕು: ಖಾಲಿದ್
ಜಾಮೀನು ನಿರಾಕರಣೆ ಸುದ್ದಿ ಕೇಳಿ ಉಮರ್ ಬೇಸರ ವ್ಯಕ್ತಪಡಿಸಿದ್ದು, ‘ಇನ್ನು ನನಗೆ ಜೈಲೇ ಬದುಕಾಗಿದೆ. ಆದರೆ, ಇತರರಿಗೆ ಜಾಮೀನು ಸಿಕ್ಕಿದ್ದು ಖುಷಿಯಾಗಿದೆ. ನಾನು ಸ್ವಲ್ಪ ಹಗುರವಾಗಿದ್ದೇನೆ’ ಎಂದು ಜೆಎನ್‌ಯು ವಿವಿಯಲ್ಲಿ ತನ್ನ ಸಹವರ್ತಿಯಾಗಿದ್ದ ಬನೊಜೋತ್‌ಸ್ನಾ ಲಾಹಿರಿ ಮುಂದೆ ಹೇಳಿಕೊಂಡಿದ್ದಾನೆ. ಈ ಬಗ್ಗೆ ಲಾಹಿರಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
